ಕನ್ನಡಪರ ಹೋರಾಟಗಾರರಿಗೆ ರೌಡಿಶೀಟರ್ ಪಟ್ಟ, ವ್ಯಾಪಕ ಆಕ್ರೋಶ

Published on

ಬೆಳಗಾವಿ: ಕಳೆದ 2021ರಲ್ಲಿ ಮಹಾಮೇಳಾವ್ ಆಯೋಜಿಸಿದ್ದ ಎಂಇಎಸ್ ಮುಖಂಡ ದೀಪಕ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದಿದ್ದ ಪ್ರಕರಣ ಹಾಗೂ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಹೋರಾಟದಲ್ಲಿ ಭಾಗವಹಿಸಿದ್ದ ಯುವ ಹೋರಾಟಗಾರರಾದ ಅನಿಲ್ ದಡ್ಡಿ, ಸಂಪತ್‌ಕುಮಾರ್ ದೇಸಾಯಿ ವಿರುದ್ಧ ರೌಡಿಶೀಟ್ ತೆರೆಯಲಾಗಿದ್ದು, ನಗರ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
 ಕನ್ನಡ ನಾಡು-ನುಡಿ ರಕ್ಷಣೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವ ಹೋರಾಟಗಾರರ ವಿರುದ್ಧ ರೌಡಿಶೀಟ್ ತೆರೆದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪತಕುಮಾರ್ ದೇಸಾಯಿ ವಿರುದ್ಧ ನಗರದ ಎಂಪಿಎಂಸಿ ಪೊಲೀಸ್ ಠಾಣೆಯಿಂದ, ಅನಿಲ್ ದಡ್ಡಿ ಅವರಿಗೆ ಟಿಳಕವಾಡಿ ಪೊಲೀಸ್ ಠಾಣೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಎಂಇಎಸ್ ಆಯೋಜಿಸಿದ್ದ ಮಹಾಮೇಳಾವ್‌ಗೆ ನುಗ್ಗಿದ ಕೆಲವರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಮಸಿ ಬಳಿದಿದ್ದರು. ಆ ಘಟನೆಯಲ್ಲಿ ಭಾಗಿಯಾದ ಕಾರಣಕ್ಕೆ ಸಂಪತ್‌ಕುಮಾರ್ ದೇಸಾಯಿ ಮತ್ತು ಅನಿಲ್ ದಡ್ಡಿಮನಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಈಗ ಚುನಾವಣೆಯ ಹಿನ್ನೆಲೆಯಲ್ಲಿ ರೌಡಿ ಚಟುವಟಿಕೆ ಮಾಡುವುದರ ಮೇಲೆ ನಿಗಾ ಇಡುವುದಕ್ಕಾಗಿ ಪೊಲೀಸರು ತಯಾರಿಸಿದ ಪಟ್ಟಿಯಲ್ಲಿ ಈ ಇಬ್ಬರು ಯುವಕರ ಹೆಸರಿದೆ. 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಬ್ಬರು ಸಾಕ್ಷಿಗಳ ಮುಚ್ಚಳಿಕೆ ಪಡೆದಿದ್ದಾರೆ. ಸದಾ ಕಾಲವೂ ಕನ್ನಡಪರ ಧ್ವನಿ ಎತ್ತುತ್ತಿದ್ದ ಈ ಯುವಕರ ಪರ ನಿಲ್ಲಬೇಕಿದ್ದ ಸರ್ಕಾರ ಈಗ ಅದೇ ಹೋರಾಟಗಾರರನ್ನು ರೌಡಿಗಳ ಪಟ್ಟಿಗೆ ಸೇರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆಗಳು ಉದ್ಭವವಾಗಿವೆ. ಈ ಘಟನೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶವಾಗಿದ್ದು, ‘ನಾಡವಿರೋಧಿ ಸರ್ಕಾರ’, ನಮ್ಮ ಸರ್ಕಾರ ನಮ್ಗಲ್ಲ.. ಬೆಳಗಾವಿ ನಮ್ಗಲ್ಲ..’ ಎಂದು ಪೋಸ್ಟ್ ಹಾಕಲಾಗಿದೆ. ಕನ್ನಡಿಗರು ನಾನಾ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶವಾಗಿದ್ದು, ಕನ್ನಡಪರ ಹೋರಾಟಗಾರರು ಸರಣಿ ಸಭೆಗಳನ್ನು ನಡೆಸಿ ಪೊಲೀಸರ ನಡೆ ಖಂಡಿಸಿದ್ದು, ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
 

 ಚುನಾವಣೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಡುವ ದೃಷ್ಟಿಯಿಂದ ನೋಟಿಸ್ ನೀಡಿದ್ದು, ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಇದೊಂದು ಪ್ರಕ್ರಿಯೆ ಅಷ್ಟೇ.

  - ಶೇಖರ್ ಎಚ್.ಟಿ., ಡಿಸಿಪಿ ಬೆಳಗಾವಿ

ಕನ್ನಡಪರ ಹೋರಾಟಗಾರರು.
ಕನ್ನಡಪರ ಹೋರಾಟಗಾರರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net