

ಶಿವಮೊಗ್ಗ: ಕನ್ನಡದಲ್ಲಿ ಮಕ್ಕಳು ಸಂವಹನ ನಡೆಸಿದರೆ ಕೆಲವು ಶಾಲೆಗಳಲ್ಲಿ ದಂಡ ವಿಧಿಸಿರುವುದನ್ನು ನಾವು ಕೇಳಿದ್ದೇವೆ. ಇದು ದುರದೃಷ್ಟಕರ. ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಇಂತಹ ಸ್ಥಿತಿ ಎದುರಾಗಬಾರದು ಎಂದು ತಹಸೀಲ್ದಾರ್ ಗಿರೀಶ್ ಹೇಳಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ನಮ್ಮ ಭಾವನೆ ತುಂಬಿರುತ್ತದೆ. ಅನ್ಯಭಾಷೆ ಕಲಿಕೆ ನಮ್ಮ ಜೀವನಕ್ಕೆ ಅಗತ್ಯ ಅದರೆ ಮಾತೃ ಭಾಷೆಯನ್ನು ಎಂದಿಗೂ ಬಿಡಬಾರದು ಶಾಲೆಗಳಲ್ಲಿ ಹಾಗೂ ನಮ್ಮ ಉದ್ಯೋಗದ ಸ್ಥಳಗಳಲ್ಲಿ ಕನ್ನಡದಲ್ಲೇ ಹೆಚ್ಚು ಮಾತನಾಡಬೇಕು ಎಂದರು.
ಶಿವಮೊಗ್ಗಕ್ಕೆ ಆಗಮಿಸಿದ ರಥಯಾತ್ರೆಯನ್ನು ಜಿಪಂ ಸಿಇಒ ಎನ್.ಹೇಮಂತ್ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮುಂತಾದವರಿದ್ದರು. ಅಶೋಕ ವೃತ್ತದಿಂದ ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಕುವೆಂಪು ರಂಗಮಂದಿರದವರೆಗೆ ವಿವಿಧ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ರಥಯಾತ್ರೆಯನ್ನು ಕರೆದೊಯ್ಯಲಾಯಿತು.