ಕನ್ನಡ ವಿಶ್ವಲಿಪಿಗಳ ರಾಣಿ

nrp kannada
ಎನ್.ಆರ್.ಪುರ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಸಿಸ್ಟರ್ ಉಷಾ ಉದ್ಘಾಟಿಸಿದರು. ನಂದಿನಿ, ಕೆ.ವಿ.ನಾಗರಾಜ್, ಐ.ಎಂ.ರಾಜೀವ, ಸಪ್ನಾ ಹೆಗ್ಡೆ, ಅನುಪಮಾ ಇತರರಿದ್ದರು.
Published on

ಎನ್.ಆರ್.ಪುರ: ಪ್ರತಿಯೊಬ್ಬರೂ ಮಾತೃಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ನಂದಿನಿ ಆಲಂದೂರು ಹೇಳಿದರು.

ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಕನ್ನಡ ಭಾಷೆಗೆ 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಸಂವಿಧಾನದಲ್ಲಿ ಭಾರತದ 22 ಭಾಷೆಗಳಲ್ಲಿ ಕನ್ನಡಕ್ಕೂ ಆದ್ಯತೆ ನೀಡಲಾಗಿದೆ. ಕನ್ನಡ ಭಾಷೆಯನ್ನು ವಿಶ್ವಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಕನ್ನಡ ನಾಡು, ನುಡಿ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕ್ವಿಜ್ ಕ್ಲಬ್ ಸಂಚಾಲಕ ಕೆ.ವಿ.ನಾಗರಾಜ್ ಮಾತನಾಡಿ, ಕನ್ನಡ ಭಾಷೆಯನ್ನು ಗೌರವಿಸಬೇಕು. ಅನ್ಯ ಭಾಷೆ ಬಗ್ಗೆ ಪ್ರೀತಿ ಇರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕನ್ನು ರೂಪಿಸಿಕೊಳ್ಳಲು ಕನ್ನಡ ಭಾಷೆಯೊಂದಿಗೆ ಇಂಗ್ಲಿಷ್ ಕಲಿಯುವುದು ಅನಿವಾರ್ಯವಾಗಿದೆ. ಮಾತೃ ಭಾಷೆ ಯಲ್ಲಿ ಹೆಚ್ಚು ಜ್ಞಾನ ಹೊಂದಿದಾಗ ಮಾತ್ರ ಇತರ ಭಾಷೆಯನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದರು.

ಉಪನ್ಯಾಸಕ ಐ.ಎಂ.ರಾಜೀವ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಹಂತದಿಂದಲೇ ನಾಡು, ನುಡಿ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಹಾಗೂ ನಾಡ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಪ್ರಾಂಶುಪಾಲರಾದ ಸಿಸ್ಟರ್ ಉಷಾ ಮತನಾಡಿ, ವಿದ್ಯಾರ್ಥಿಗಳು ನಿಸ್ವಾರ್ಥವಾಗಿ ನಾಡಿನ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಕನ್ನಡನಾಡಿಗೆ ಹೆಸರು ತರುವ ಕೆಲಸ ಮಾಡಬೇಕು ಎಂದರು.

ಕನ್ನಡ ನಾಡು, ನುಡಿ, ಕವಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕಿ ಸ್ವಪ್ನಾ ಹೆಗ್ಡೆ, ಕ್ವಿಜ್ ಕ್ಲಬ್ ಸಂಚಾಲಕಿ ಅನುಪಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net