ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ

Vatal Nagaraj
Published on

ಕನ್ನಡ ಮಾಧ್ಯಮ ಶಾಲೆಗಳನ್ನು ಎಂದಿಗೂ ಮುಚ್ಚಬಾರದು, ಅವುಗಳನು ಉಳಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಭಾನುವಾರ ನಗರದ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳದ್ದು ಕಣ್ಣೀರ ಕತೆಯಾಗಿದೆ. ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಆರಂಭಿಸಲು ಮುಂದಾಗಿರುವುದು ಸರಿಯಲ್ಲ. ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡದೆ ಕರ್ನಾಟಕದಲ್ಲಿ ಕನ್ನಡವನ್ನು ಕಡೆಗಾಣಿಸಿದ್ದಾರೆ. ರಾಜ್ಯದಲ್ಲಿ ಪರಭಾಷೆಯವರ ದಬ್ಬಾಳಿಕೆ ಹೆಚ್ಚಾಗಿದ್ದು, ಹಿಂದಿಯನ್ನು ಹೇರುತ್ತಿದ್ದಾರೆ. ಬ್ಯಾಂಕ್, ರೈಲ್ವೆ ಇಲಾಖೆಯಲ್ಲಿ ಹಿಂದಿ ದರ್ಬಾರ್ ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಹೀಗೆ ಮಾಡುವುದಕ್ಕಿಂತ ಕನ್ನಡ ಮಾಧ್ಯಮ ಶಾಲೆ ಉಳಿಸಿ, ಶಾಲೆಗಳಿಗೆ ಶಿಕ್ಷಕರ ಕೊರತೆ ನೀಗಿಸಿ, ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು, ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಚ್ಚರಿಕೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದ 125 ಅಂಕವನ್ನು 100 ಇಳಿಕೆ ಮಾಡುವ ವಿಚಾರವಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ಕನ್ನಡ ವಿಷಯಕ್ಕೆ ಇರುವ 125 ಅಂಕಗಳನ್ನು 100ಕ್ಕೆ ಇಳಿಕೆ ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಯಿತು. ಆದರೆ, ಅವರಲ್ಲಿನ ಕಿತ್ತಾಟವೇ ಇನ್ನೂ ಮುಗಿದಿಲ್ಲ. ಮಂತ್ರಿಗಳಂತೂ ಅವರ ಇಷ್ಟ ಬಂದಹಾಗೆ ಆಡುತ್ತಿದ್ದಾರೆ. ರಾಜ್ಯದ ಸಮಸ್ಯೆ ಸಾವಿರಾರು ಇವೆ. ಅದನ್ನು ಬಿಟ್ಟು ನೀವು ನೀವೇ ಕಿತ್ತಾಡಿದರೆ ಅದು ನಮ್ಮ ನಾಡಿಗೆ ಅಗೌರವ ತೋರಿಸಿದಂತೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಹೋರಾಟಗಾರರಾದ ಪಾರ್ಥಸಾರಥಿ, ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ತೇಜಸ್ ಲೋಕೇಶ್‌ಗೌಡ, ಮಂಜುನಾಥ್ ಇತರರಿದ್ದರು.

ಸಿದ್ದರಾಮಯ್ಯ ಮೊದಲಿನಂತೆ ಇಲ್ಲ, ಜೊಳ್ಳಾಗಿ ಹೋಗಿದ್ದಾರೆ. ನಾನೇ ಐದು ವರ್ಷ ಸಿಎಂ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಮಠಾಧಿಪತಿಗಳು ರಾಜಕೀಯದಲ್ಲಿ ಮೂಗು ತೂರಿಸುವುದು ಸರಿಯಲ್ಲ.

ವಾಟಾಳ್ ನಾಗರಾಜ್, ಕನ್ನಡ ಚಳವಳಿ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net