ಕನ್ನಡ ಉಳಿಸಿ, ಬೆಳೆಸುವುದು ಎಲ್ಲರ ಜವಾಬ್ದಾರಿ

9
Published on

ನಮ್ಮ ಭಾಷೆಗೆ ಪ್ರಾಮುಖ್ಯ ನೀಡದಿದ್ದರೆ ಅದರ ರುಚಿ ಸವಿಯುವುದು ಅಸಾಧ್ಯ ಎಂದು ಮೈಸೂರು ಡಯೋಸಿಸನ್ ಎಜುಕೇಷನಲ್ ಸೊಸೈಟಿಯ ಖಜಾಂಚಿ ರೆ. ಫಾ.ನವೀನ್ ಕುಮಾರ್ ಹೇಳಿದರು.

ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ನುಡಿಹಬ್ಬ ಸಮಾರಂಭದಲ್ಲಿ ಮಾತನಾಡಿದರು. ಹಣ್ಣು ರುಚಿಯಾಗಿದೆಯೇ ಇಲ್ಲವೇ ಎಂಬುದನ್ನು ತಿಂದು ಸವಿಯಬೇಕು. ಅದೇ ರೀತಿ ಭಾಷೆಯ ಸೊಗಡನ್ನು ಅನುಭವಿಸಿಯೇ ನೋಡಬೇಕು. ವಿದೇಶಗಳಲ್ಲಿರುವ ಕನ್ನಡಿಗರು ಮತ್ತೊಬ್ಬ ಕನ್ನಡಿಗ ಸಿಕ್ಕರೆ ಎಷ್ಟು ಖುಷಿ ಪಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದರು.

ಕನ್ನಡವನ್ನು ಅಳಿವಿನ ಅಂಚಿಗೆ ಹೋಗಲು ಬಿಡಬಾರದು. ಅದನ್ನು ಒಕ್ಕೊರಲಿನಿಂದ ಉಳಿಸುವುದು ಕರ್ನಾಟದಲ್ಲಿ ವಾಸಿಸುವ ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಯಾವುದೇ ಭಾಷೆ ಕಲಿಯಲು ನಿರ್ಬಂಧ ಇರಬಾರದು. ಹೆಚ್ಚೆಚ್ಚು ಭಾಷೆಗಳನ್ನು ಕಲಿತರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಎಂಡಿಇಎಸ್ ತರಬೇತಿ ಮತ್ತು ಅಭಿವೃದ್ಧಿ ವಿಭಾಗದ ಸಿಇಒ ಸೆಬಿ ಮಾವೇಲಿ ಇದ್ದರು.

ಮುಖ್ಯ ಅತಿಥಿಯಾಗಿದ್ದ ಖ್ಯಾತ ಜಾನಪದ ಕಲಾವಿದ ಅಮ್ಮ ರಾಮಚಂದ್ರ ಅವರು ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು’. ’ಒಳಿತು ಮಾಡು ಮನುಷ’, ’ಚೆಲ್ಲಿದರೂ ಮಲ್ಲಿಗೆಯಾ’, ’ದೂರಿ ದೂರಿ’, ’ಉತ್ತನಹಳ್ಳಿ ಮಾರಮ್ಮ’ ’ಕನ್ನಡದ ಮಾತು ಚೆಂದ’ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾಲೇಜಿನ ಪ್ರಾಂಶುಪಾಲೆ ಎನ್. ಪೂರ್ಣಿಮಾ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಪುಷ್ಪಾ, ಕನ್ನಡ ವಿಭಾಗದ ಮುಖ್ಯಸ್ಥ ಎ.ಎಸ್. ಮಹೇಶ್ ಇತರರಿದ್ದರು.

ಇದೇ ವೇಳೆ ವಿದ್ಯಾರ್ಥಿಗಳು ಕಂಸಾಳೆ ನೃತ್ಯ, ಯಕ್ಷಗಾನ ಮತ್ತು ಕನ್ನಡ ಚಲನಚಿತ್ರ ಹಾಡುಗಳಿಗೆ ನೃತ್ಯ ಮಾಡಿ ನೆರೆದವರನ್ನು ರಂಜಿಸಿದರು. ಸ್ನೇಹ, ಲಕ್ಷ್ಯ- ಕಂಸಾಳೆ, ರಾಧಿಕಾ ಮತ್ತು ತಂಡ ಕನ್ನಡ ಚಿತ್ರಗಳಿಗೆ ನೃತ್ಯ, ವಾಣಿ ಕ್ರಿಸ್ಟೋಫರ್ ತಂಡ ಕಂಸಾಳೆ ಪ್ರದರ್ಶಿಸಿ, ಚಪ್ಪಾಳೆ ಗಿಟ್ಟಿಸಿಕೊಂಡರು. ಮತ್ತೊಂದು ತಂಡ ಎಕ್ಕ ಸಕ್ಕ, ಎಕ್ಕಸಕ್ಕ ಹಾಡಿಗೆ ಮಾಡಿದ ನೃತ್ಯ ಸಭಿಕರನ್ನು ರಂಜಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net