ದಾವಣಗೆರೆ : ಕನ್ನಡ ಅನ್ನದ ಭಾಷೆಯಾಗಬೇಕು. ರಾಜ್ಯದ ಕಾರ್ಖಾನೆಗಳು, ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಸಿಗುವಂತಾಗಬೇಕು ಎಂದು ಹಂಪಿ ಕನ್ನಡ ವಿವಿಯ ಕುಲಪತಿ ಡಾ. ಸ.ಚಿ. ರಮೇಶ ಹೇಳಿದರು.
ಹಂಪಿ ಕನ್ನಡ ವಿವಿಯ ಕನ್ನಡ ಭಾಷಾಧ್ಯಯನ ವಿಭಾಗದ ಸಹಯೋಗದಲ್ಲಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಕನ್ನಡದ ಬೆಳವಣಿಗೆ : ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕನ್ನಡದಲ್ಲಿ ಶಿಕ್ಷಣ ಪಡೆದವರಿಗೆ ಆದ್ಯತೆ ಸಿಗಬೇಕು, ಆಗ ಕನ್ನಡ ರಾಜಭಾಷೆಯಾಗುತ್ತದೆ. ಗ್ರಾಮೀಣ ಪ್ರದೇಶಗಳ ಜನರಿಗೆ ಸ್ಪಂದಿಸುವ, ಅವರಿಗೆ ಪ್ರೀತಿ ತೋರಿಸುವ ವೈದ್ಯರು, ಇಂಜಿನಿಯರುಗಳು ಸೇವೆಗೆ ಸೇರಬೇಕು ಎಂದು ಆಶಿಸಿದರು.
ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ಮೀಸಲಾತಿ ನೀಡುತ್ತಿದೆ. ಕನ್ನಡ ಉಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಭಾಷೆಗೆ ದೊಡ್ಡ ಶಕ್ತಿಯಿದೆ. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕನ್ನಡ ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿವೆ. ಅನೇಕ ಮಹನೀಯರು ಭಾಷೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಜಾನಪದ, ನಾಟಕ, ಸಿನಿಮಾ, ಮಾಧ್ಯಮ ಮುಂತಾದ ರಂಗಗಳ ಮೂಲಕ ಕನ್ನಡವನ್ನು ಕಟ್ಟುವ ಕಾರ್ಯ ನಡೆದುಕೊಂಡು ಬಂದಿದೆ ಎಂದರು.
ಆದರೆ ಇತ್ತೀಚೆಗೆ ಕನ್ನಡದ ಮೇಲಿನ ಅಭಿಮಾನ ಕಡಿಮೆಯಾಗುತ್ತಿದೆ. ಬೆಂಗಳೂರಿಗೆ ಹೋದರೆ ವಿದೇಶಕ್ಕೆ ಹೋದ ಅನುಭವವಾಗುತ್ತದೆ. ಇಂಥ ವಾತಾವರಣದಿಂದ ಹೊರ ಬರಬೇಕು. ಯುವಜನರು ಭಾಷೆಯನ್ನು ಉಳಿಸಿ ಬೆಳೆಸಬೇಕು. ಕನ್ನಡದ ಕಥೆ, ಕಾದಂಬರಿಗಳನ್ನು ಓದಬೇಕು. ನಾಡು, ನುಡಿಯನ್ನು ಪ್ರೀತಿಸಬೇಕು ಎಂದು ಹೇಳಿದರು.
ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಹಿರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಚಿರಂಜೀವಿ ಸಿಂಗ್, ಅಜಯಕುಮಾರ್ ಸಿಂಗ್ ಮುಂತಾದವರು ಕನ್ನಡವನ್ನು ಕಲಿತು ಸುಂದರವಾಗಿ ಮಾತನಾಡುವ, ಬರೆಯುವ ಮಟ್ಟಕ್ಕೆ ಅಭಿಮಾನ ತೋರಿದರು. ಆ ಕೆಲಸ ನಮ್ಮಿಂದ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.