ಕನಸು ಸಾಕಾರಗೊಳ್ಳಲು ಓದುವ ಅಭ್ಯಾಸ ಬೆಳೆಸಿಕೊಳ್ಳಿ

22
Published on

ಉತ್ಕೃಷ್ಟ ಕನಸುಗಳು ಸಾಕಾರಗೊಳ್ಳಲು ಮಕ್ಕಳು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಾನಸ ಕೀಲು ಮೂಳೆ ಆಸ್ಪತ್ರೆ ವೈದ್ಯ ಡಾ.ರಘುನಂದನ್ ಹೇಳಿದರು.

ವಿ ಕೇರ್ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ತಿಂಗಳ ಪುಸ್ತಕ ಓದು ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕಗಳ ಓದುವಿಕೆ ಮನುಷ್ಯನನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ದು ನಿಲ್ಲಿಸುತ್ತದೆ. ಆಧುನಿಕ ಪ್ರಪಂಚದ ಸಂಪರ್ಕ ಇಲ್ಲದ ನನ್ನೂರಿನ ಮೊದಲ ವೈದ್ಯ ನಾನು. ಬಹುಶಃ 6ನೇ ತರಗತಿಯಲ್ಲಿ ನಾನು ಗ್ರಂಥಾಲಯಕ್ಕೆ ಹೋಗದೆ ಇದ್ದಿದ್ದರೆ ಓದಿನ ಬಗ್ಗೆ ಒಲವು ಮೂಡುತ್ತಿರಲಿಲ್ಲ. ವೈದ್ಯನಾಗುತ್ತಲೂ ಇರಲಿಲ್ಲ ಎಂದರು.

ಪುಸ್ತಕಗಳ ಓದು ನಮ್ಮ ದೃಷ್ಟಿಕೋನವನ್ನು ಹಿಗ್ಗಿಸುವುದರೊಡನೆ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಿಕೊಡುತ್ತವೆ. ಕಂಡ ಕನಸುಗಳನ್ನು ನನಸು ಮಾಡಲು ಓದುವುದೊಂದೇ ನಮಗಿರುವ ಸುಲಭದ ಹಾದಿಯಾಗಿದೆ ಎಂದು ಹೇಳಿದರು.

ಸಾಮಾಜಿಕ ಚಿಂತಕ ರವಿ ಬಳೆ ಮಾತನಾಡಿ, ಕಥೆಗಳನ್ನು ಓದುವುದು , ವಾಚಿಸುವುದು ಹಾಗೂ ಕೇಳುವುದರ ಬಗ್ಗೆ ಮಕ್ಕಳಿಗಾಗಿ ವಿವರಿಸಿದರು.

ಲೇಖಕಿ ಡಾ.ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಮಕ್ಕಳ ಕಥಾ ಮಾಲಿಕೆಯಿಂದ ಆಯ್ದ ಕಥೆಗಳನ್ನು ಸಂಜನಾ, ಉಜ್ವಲಾ, ಕಾನೂನು ವಿದ್ಯಾರ್ಥಿನಿ ಮಹಾದೇವಮ್ಮ, ಸೂರ್ಯ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net