ಕೇಂದ್ರ ಗೃಹ ಸಚಿವರ ಪದಕಕ್ಕೆ ರಾಜ್ಯದ ಐವರು ಪೊಲೀಸರು ಆಯ್ಕೆ

Police Cap
Published on

ಬೆಂಗಳೂರು :ಅಪರಾಧ ಪ್ರಕರಣಗಳ ಅತ್ಯುತ್ತಮ ತನಿಖೆಗಾಗಿ ರಾಜ್ಯದ ಐದು ಪೊಲೀಸ್ ಅಧಿಕಾರಿಗಳಿಗೆ ೨೦೨೩ ನೇ ಸಾಲಿನ ಕೇಂದ್ರ ಗೃಹ ಸಚಿವರ ಪದಕದ ಗೌರವಕ್ಕೆ ಭಾಜನರಾಗಿದ್ದಾರೆ.

ಲೋಕಾಯುಕ್ತ ಗದಗ ಡಿವೈಎಸ್ಪಿ ಶಂಕರ್ ಎಂ.ರಾಗಿ, ರಾಮನಗರ ಜಿಲ್ಲೆ ತಾವರೆಕೆರೆ ಠಾಣೆಯ ಇನ್‌ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ಮತ್ತು ಆರ್‌ಎಂಸಿ ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್ ಪಿ.ಸುರೇಶ್, ಶಿವಮೊಗ್ಗದ ವಿನೋಬಾನಗರ ಠಾಣೆ ಇನ್‌ಸ್ಪೆಕ್ಟರ್ ರುದ್ರೇಗೌಡ ಆರ್.ಪಾಟೀಲ್ ಅವರಿಗೆ ಪದಕ ಲಭಿಸಿದೆ.

ಕೇಂದ್ರ ಗೃಹ ಸಚಿವಾಲಯವು ಕ್ಷಿಷ್ಟಕರ ಪ್ರಕರಣಗಳನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪದಕ ನೀಡಿ ಗೌರವಿಸುತ್ತದೆ. ಈ ಬಾರಿಯು ದೇಶದ ೧೪೦ ಪೊಲೀಸ್ ಅಧಿಕಾರಿಗಳನ್ನು ಪದಕಕ್ಕೆ ಆಯ್ಕೆ ಮಾಡಲಾಗಿದೆ.

ರಾಷ್ಟ್ರಮಟ್ಟದ ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತನಾಗಿರುವುದು ಒಂದೆಡೆ
ಸಂತಸ ತಂದಿದೆ. ಮತ್ತೊಂದೆಡೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಹಾಗಾಗಿ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಿ ಸಮಾಜಘಾತುಕ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಟ್ಟು ನಾಗರಿಕರ ಸುರಕ್ಷತೆ,
ಸುಭದ್ರತೆಗೆ ಕ್ರಮವಹಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸದಾ ಶ್ರಮಿಸುತ್ತೇನೆ.
ರಾಮಪ್ಪ ಬಿ.ಗುತ್ತೇರ್, ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತರು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸೇರಿ ಇತರೆ ಪ್ರಕರಣದಲ್ಲಿ ಆರೋಪಿಗಳ, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸಿತ್ತು. ಇದರ ಜತೆಗೆ
೨೦೧೮ರಿಂದ ಇಲ್ಲಿಯವರೆಗೆ ನಾವು ತನಿಖೆ ಮಾಡಿದಂತಹ ಹಲವು ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಇದನ್ನು ಕೇಂದ್ರ ಸರ್ಕಾರ ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದೆ. ಇಲಾಖೆ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ.
ಸಿ.ಬಿ.ಶಿವಸ್ವಾಮಿ, ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತರು

ನಾನು ಚಿಕೋಡಿಯಲ್ಲಿ ಸಿಪಿಐ ಆಗಿದ್ದ ವೇಳೆ ಒಂದು ಡಬಲ್ ಮರ್ಡರ್ ಪ್ರಕರಣ ಪ್ರಕರಣ ದಾಖಲಾಗಿತ್ತು. ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪತಿ ಇತರೆ ನಾಲ್ವರೊಂದಿಗೆ ಸೇರಿ ಪತ್ನಿ ಮತ್ತು ಆತನ ಸ್ನೇಹಿತನನ್ನು ಯಂತ್ರದಿಂದ ತುಂಡು ತುಂಡು ಮಾಡಿ ಕೊಂದಿದ್ದ. ಆ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಕೋರ್ಟ್‌ಗೆ ಚಾಜ್‌ಶೀಟ್ ಸಲ್ಲಿಸಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಯಿತು. ಇದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಇದರಿಂದ ನಾವು ಕೂಡ ಉತ್ಕೃಷ್ಟ ತನಿಖೆ ಮಾಡಬೇಕೆಂದು ಇತರೆ ಅಧಿಕಾರಿಗಳಿಗೆ ಇದು ಸ್ಫೂರ್ತಿ ಸಿಗಲಿದೆ.

ಶಂಕರ್ ಎಂ.ರಾಗಿ, ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತರು
ನಾನು ಚನ್ನಗಿರಿ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಸುಳೆಕೆರೆ ಹತ್ತಿರದ ಗುಡ್ಡದ ಚಾನಲ್‌ನಲ್ಲಿ ಅಪರಿಚಿತ ದೇಹ ಸಿಗುತ್ತದೆ. ಅದು ಯಾವ ರೀತಿ ಕೊಲೆಯಾಗಿದೆ ಎಂಬುದು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗದ ರೀತಿ ಮೃತದೇಹವಿತ್ತು. ಶ್ವಾನದಳ ಬಳಸಿ ತನಿಖೆ ಕೈಗೊಂಡಾಗ ಸುಮಾರು ೧೧ ಕಿ.ಮೀ ಶ್ವಾನ ಓಡಿ ಒಂದು ಕಡೆ ನಿಂತು ಒಂದು ಸಣ್ಣ ಸುಳಿವನ್ನು ನೀಡುತ್ತದೆ. ಆಗ ಜಾಗದಲ್ಲಿ ಅಪರಿಚಿತ ವ್ಯಕ್ತಿ ಬಂದು ಹೋಗಿರುವ ಬಗ್ಗೆ ಬಾತ್ಮೀದಾರರಿಂದ ಮಾಹಿತಿ ಸಿಗುತ್ತದೆ. ನಂತರ ಶಂಕಿತರನ್ನು ತಂದು ವಿಚಾರಣೆ ನಡೆಸಿದ್ದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಳ್ಳುತ್ತಾರೆ. ಈ ರೀತಿಯಾಗಿ ಸವಲಾಗಿದ್ದ ಹಲವು ಪ್ರಕರಣವನ್ನು ಭೇದಿಸಿದ್ದೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ರುದ್ರೇಗೌಡ ಆರ್.ಪಾಟೀಲ್, ಕೇಂದ್ರ ಗೃಹ ಸಚಿವರ ಪದಕ ಪುರಸ್ಕೃತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net