

ಪ್ರಸ್ತುತ ದಿನಗಳಲ್ಲಿ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿದ್ದು, ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳಿಗೆ ಒಳಗಾಗಿ ಸ್ವಾಸ್ಥೃ ಸಮಾಜ ಹಾಳಾಗುತ್ತಿದೆ ಎಂದು ಸುತ್ತೂರಿನ ಜೆಎಸ್‌ಎಸ್ ಸಂಸ್ಥೆಯ ಶಿಕ್ಷಕ ಎನ್.ಪಿ.ಪರಶಿವಮೂರ್ತಿ ಹೇಳಿದರು.
ನಗರದ ಜೆಎಸ್‌ಎಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ (ಬಾಲ ಜಗತ್)ನಲ್ಲಿ ಸೋಮವಾರ ಆಯೋಜಿಸಿದ್ದ ‘ನಾವು ಮನುಜರು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಂಜಾಟದ ಬದುಕಿನಲ್ಲಿ ಸಂತೋಷ, ಪ್ರೀತಿ, ವಿಶ್ವಾಸ, ಸಹಾನುಭೂತಿ, ನೆಮ್ಮದಿಯಿಂದ ದೂರವಾಗಿದ್ದೇವೆ. ಭಾವನೆಗಳು, ಬಾಂಧವ್ಯಕ್ಕೆ ಬೆಲೆ ಕೊಡದೆ ಸ್ವಾರ್ಥತನದಿಂದ ಬದುಕುತ್ತಿದ್ದೇವೆ ಎಂದರು.
ಮನುಷ್ಯ ಮೀನಿನಂತೆ ಈಜುವುದನ್ನು, ಆಕಾಶದಲ್ಲಿ ಹಕ್ಕಿಯಂತೆ ಹಾರಾಡುವುದನ್ನು ಕಲಿತ. ವಿಜ್ಞಾನ, ತಂತ್ರಜ್ಞಾನದಲ್ಲಿ ನವೀನತೆಯನ್ನು ಸಾಧಿಸಿ, ಅನ್ಯ ಗ್ರಹಗಳಲ್ಲಿ ಸಂಶೋಧನೆಯನ್ನು ಮಾಡಿದ. ಆದರೆ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಮಾತ್ರ ಕಲಿಯಲಿಲ್ಲ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಪ್ರತಿಭೆ, ವ್ಯಕ್ತಿತ್ವ ವಿಕಸನ, ಸಹಾನುಭೂತಿ, ಮಾನವೀಯ ಮೌಲ್ಯಗಳು, ಭಾವನಾತ್ಮಕ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಾಗಿ ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಡಿ.ಬಿ.ಸದಾಶಿವಪ್ಪ ಮಾತನಾಡಿ, ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ನುಡಿದರು.
ಶಾಲೆಯ ವಿದ್ಯಾರ್ಥಿಗಳು ಮೌಲ್ಯಯುತವಾದ ಅನೇಕ ಕಿರು ನಾಟಕ, ಸಮೂಹ ಗೀತೆ, ಸಮೂಹ ನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಅರಿವು ಮಾಡಿಸುವುದರ ಮೂಲಕ ಮನರಂಜಿಸಿದರು.