ಕಣ್ಮನಸೆಳೆದ 'ಮಲಪ್ರಭಾ ಆರತಿ'

Published on

ಖಾನಾಪುರ: ಪಟ್ಟಣದ ಮಲಪ್ರಭಾ ನದಿತೀರದಲ್ಲಿ ಶನಿವಾರ ಸಂಜೆ ನಡೆದ ‘ಮಲಪ್ರಭಾ ಆರತಿ’ ಕಾರ್ಯಕ್ರಮ ಕಣ್ಮನಸೆಳೆಯಿತು.
ಮಹಾಶಿವರಾತ್ರಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ದತ್ತಪೀಠ, ಬಿಜೆಪಿ, ವಿಶ್ವ ಹಿಂದೂ ಪರಿಷತ್, ಇಸ್ಕಾನ್ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲಪ್ರಭೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ವಧರ್ಮೀಯರು ಭಾಗವಹಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಯಿತು.
ಪಾರಿಶ್ವಾಡದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ‘ಭಾರತೀಯ ಸಂಸ್ಕೃತಿಯಲ್ಲಿ ಗಂಗಾಪೂಜೆಗೆ ತನ್ನದೇಯಾದ ಮಹತ್ವವಿದೆ. ಇಲ್ಲಿ ಇಂಥದ್ದೊಂದು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.
ಆರ್‌ಎಸ್ಎಸ್ ಮುಖಂಡ ರಾಮನಾಥ ನಾಯ್ಕ, ‘ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಒತ್ತು ಕೊಡಬೇಕು. ಪರಿಸರ ಸಂರಕ್ಷಣೆಯೇ ನಮ್ಮ ಮೂಲ ಆದ್ಯತೆಯಾಗಬೇಕು. ನೀರನ್ನು ಮಿತವಾಗಿ ಬಳಸಬೇಕು’ ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡೆ ಡಾ.ಸೋನಾಲಿ ಸರ್ನೋಬತ್‌, ‘ಎಲ್ಲರೂ ನದಿಗಳ ಪಾವಿತ್ರ್ಯ ಕಾಪಾಡಬೇಕು. ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ಕೊನೆಗೆ ಕೋರಿದರು.
ದತ್ತಪೀಠದ ಖಾನಾಪುರ ಘಟಕದ ಮುಖ್ಯಸ್ಥ ಡಾ.ಗೌರೀಶ್ ಭಾಲ್ಕೇಕರ್, ವಾಣಿ ರಮೇಶ, ದಾನೇಶ್ವರಿ ಪಾಡೇಕರ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net