

ಅದೊಂದು ವಿಶೇಷ ಕಾರ್ಯಕ್ರಮ. ಅಲ್ಲಿದ್ದ ವಿಶೇಷರು ಪ್ರದರ್ಶಿಸಿದ ಒಂದೊಂದು ಮಾಡೇಲ್ಗಳು ಅದ್ವಿತೀಯ ಎನಿಸಿದವು, ಸಾರ್ವಜನಿಕರಿಗೆ ಮಾಹಿತಿ ಭಂಡಾರ ಆದವು!
ನಗರದ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯ ಆವರಣದಲ್ಲಿರುವ ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಮುಕ್ತದಿನ ಸಮಾರಂಭದಲ್ಲಿ ಅಂಗವಿಕಲ ಮಕ್ಕಳ ಶೈಕ್ಷಣಿಕ ವಸ್ತು ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಆರ್ಕಿಟೆಕ್ಚರ್ ಅಸಿಸೆಂಟ್‌ಷಿಪ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್, ಅಪರೆಲ್ ಡಿಸೈನ್ ಮತ್ತು ಫ್ಯಾಬ್ರಿಕೇಷನ್ ಟೆಕ್ನಾಲಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ವೆಹಿಕಲ್ ಟೆಕ್ನಾಲಜಿ ಹೀಗೆ... ವಿಭಾಗವಾರು ವಿದ್ಯಾರ್ಥಿಗಳು ತಮ್ಮ ವಿಷಯವಾಗಿ ತಯಾರಿಸಿದ್ದ ಮಾದರಿಗಳು, ವಿಜ್ಞಾನ ಮಾದರಿಗಳು ಆಕರ್ಷಿಸಿದವು. ಪ್ರತಿ ಮಾದರಿಗೂ ಮಕ್ಕಳು ನೀಡುತ್ತಿದ್ದ ವಿವರಣೆ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಸಂಸತ್ ಭವನ ಮಾದರಿ, ಸುಪ್ರೀಂಕೋರ್ಟ್, ಹೈಕೋರ್ಟ್, ಪ್ರಾಚೀನ ನಾಗರಿಕತೆ ಬದುಕು, ಭಾವೈಕ್ಯತೆ ಸಂದೇಶದ ಆಚರಣೆಗಳು, ವಿದ್ಯುತ್ ಉತ್ಪಾದನೆ ಪದ್ಧತಿ, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಜಾನಪದ ವಸ್ತುಗಳ ಬಳಕೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತಿಗಳ ಭಾವಚಿತ್ರ ಪ್ರದರ್ಶನ ನೋಡಗರನ್ನು ಸೆಳೆಯಿತು.
ಭಾರತದ ಪ್ರವಾಸಿ ತಾಣಗಳು, ಮಳೆ ನೀರು ಸಂಗ್ರಹಣೆ, ಆಯುರ್ವೇದ ಪದ್ಧತಿ ಬಳಕೆ, ಅರಣ್ಯ ಸಂರಕ್ಷಣೆ, ವಿವಿಧ ರಾಜ್ಯದ ಆಹಾರ ಪದ್ಧತಿ, ಐತಿಹಾಸಿಕ ಕೋಟೆ ಕೊತ್ತಲುಗಳು, ಪ್ರಾಣಿ ಸಂಗ್ರಹಾಲಯ, ದೇವಸ್ಥಾನಗಳ ಮಾದರಿ, ಚಿನ್ನಸ್ವಾಮಿ ಕ್ರೀಡಾಂಗಣ, ವಿವಿಧ ಧರ್ಮದ ಆಚರಣೆಗಳ ಜಾಗೃತಿ, ವಿವಿಧ ಕ್ರೀಡೆಗಳ ಮೈದಾನ ಚಿತ್ರಣ ಸೇರಿದಂತೆ ನೂರಾರು ಮಾದರಿಗಳನ್ನು ಸಿದ್ಧಪಡಿಸಿದ ವಿಶೇಷ ಚೇತನ ವಿದ್ಯಾರ್ಥಿಗಳು, ಮಾದರಿಗಳನ್ನು ವಿವರಿಸಿದರು.
ಸಮರ್ಥನಂ ಟ್ರಸ್ಟ್ ಸದಸ್ಯ ಶಿವರಾಂ ದೇಶಪಾಂಡೆ, ಜೆಎಸ್‌ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ವಿ.ಪಿ.ಲೋಕೇಶ್, ಪತ್ರಕರ್ತ ಸುರೇಶ್, ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಇಳಂಗೋವನ್, ಉಪನ್ಯಾಸಕರಾದ ಡಾ.ಪಳನಿಸ್ವಾಮಿ, ಎನ್.ಎಂ.ಶಿವಕುಮಾರಸ್ವಾಮಿ, ಸಿ.ಸುಮ ಮತ್ತಿತರರು ಇದ್ದರು.