ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯ ಸರ ಕಳವು

Crime Logo
Published on

ಕಡೂರು/ಬೀರೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಇಬ್ಬರು ಮಹಿಳೆಯರ ಚಿನ್ನದ ಸರ ಕತ್ತಿಕೊಂಡು ಪರಾರಿಯಾಗಿದ್ದಾರೆ.

ಸೋಮವಾರ ಹೂವಿನಹಳ್ಳಿಯ ವೇದಮೂರ್ತಿ ಹಾಗೂ ಪತ್ನಿ ಹೇಮಾವತಿ ಕುಡ್ಲೂರಿನಿಂದ ಮುಂಡ್ರೆ ಕಡೆ ಹೋಗುವಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ದಂಪತಿ ಕಣ್ಣಿಗೆ ಖಾರದ ಪುಡಿ ಎರಚಿ ಹೇಮಾವತಿ ಅವರ ಚಿನ್ನದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಹೋಗಲು ಯತ್ನಿಸಿದಾಗ ಹೇಮಾವತಿ ಅರ್ಧ ಭಾಗದಷ್ಟು ಸರ ಕೈನಲ್ಲಿ ಹಿಡಿದುಕೊಂಡಿದ್ದಾರೆ. ಆಗ ಅರ್ಧ ಸರ ಅವರ ಕೈಯಲ್ಲಿ ಉಳಿದಿದ್ದು ಇನ್ನು ಉಳಿದ ಸರ ಕಿತ್ತುಕೊಂಡು ಹೋಗಿದ್ದಾರೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕಡೂರು ತಾಲೂಕಿನ ಚಟ್ಟನಹಳ್ಳಿ ಗ್ರಾಮದ ಶಾಲಾ ಶಿಕ್ಷಕಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿದ ದುಷ್ಕರ್ಮಿಗಳು ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ.

ಶಂಕರಾಪುರದಲ್ಲಿ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಚಟ್ಟನಹಳ್ಳಿ ಗ್ರಾಮದ ಜಯಮ್ಮ ಶಾಲೆ ಮುಗಿದ ಬಳಿಕ ಗ್ರಾಮಕ್ಕೆ ಪತಿಯೊಡನೆ ಬೈಕ್‌ನಲ್ಲಿ ತೆರಳುತ್ತಿರುವಾಗ ರಸ್ತೆ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತಿದ್ದಾರೆ. ಎಳೆಯುವ ರಭಸಕ್ಕೆ ಸರದ ಅರ್ಧ ಭಾಗ ತುಂಡಾಗಿದೆ. ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net