

ಬಸವಕಲ್ಯಾಣ: ಬಿಜೆಪಿಯವರು ಮಾಡಿದ ಅನ್ಯಾಯದ ಹಿನ್ನೆಲೆಯಲ್ಲಿ ಸ್ವಾಭಿಮಾನಕ್ಕಾಗಿ ನಾನು ಚುನಾವಣೆ ಕಣದಲ್ಲಿ ಉಳಿದಿರುವೆ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲ್ಲ. ಸ್ವಾಭಿಮಾನಕ್ಕೆ ಕಲ್ಯಾಣದ ಜನ ಆಶೀರ್ವದಿಸಲಿದ್ದಾರೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.
ಕಣದಿಂದ ಹಿಂದೆ ಸರಿಯವಂತೆ ಅದೆಷ್ಟೇ ಒತ್ತಡ ಬಂದರೂ ಕ್ಷೇತ್ರದ ಎಲ್ಲ ಸಮುದಾಯದ ಜನರು ಧೈರ್ಯ ತುಂಬಿರುವ ಕಾರಣ ನಾಮಪತ್ರ ವಾಪಸ್ ಪಡೆದಿಲ್ಲ. ಸ್ಥಳೀಯರ ಸ್ವಾಭಿಮಾನದ ಪ್ರಶ್ನೆಯ ಚನಾವಣೆ ಇದಾಗಿದೆ. ಕ್ಷೇತ್ರದ 253 ಬೂತ್ಗಳಿಗೆ ಹೋಗಿ ನ್ಯಾಯ ಕೇಳುವೆ. ನನಗಾದ ಅನ್ಯಾಯ ಜನರ ಮುಂದೆ ಇಡುವೆ. ಸ್ಥಳೀಯರೇ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಸವಕಲ್ಯಾಣದಲ್ಲಿ ಭ್ರಷ್ಟಾಚಾರ, ಗೂಂಡಾಗಿರಿ ಸೇರಿ ಅಕ್ರಮ ಕೆಲಸಗಳು ನಡೆಯುತ್ತಿವೆ. ನಾನು ಗೆದ್ದು ಬಂದರೆ ನಿಯಂತ್ರಿಸುವೆ ಎಂದು ಬಿಜೆಪಿ ಅಭ್ಯರ್ಥಿ ಸಲಗರ್ ಪ್ರಚಾರದಲ್ಲಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವುದು ಬಿಜೆಪಿ ಸರ್ಕಾರ. ಅವರ ಪಕ್ಷದ ಅಭ್ಯರ್ಥಿಯೇ ಈ ರೀತಿ ಆರೋಪ ಮಾಡುತ್ತಿದ್ದರೆ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಂಸದ ಭಗವಂತ ಖೂಬಾ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ನಾನು ಗೂಂಡಾ, ಭ್ರಷ್ಟಾಚಾರಿಯಾಗಿದ್ದರೆ 2018ರ ಚುನಾವಣೆಯಲ್ಲಿ ನನಗೆ ಬಿಜೆಪಿಗೆ ಕರೆತಂದು ಟಿಕೆಟ್ ನೀಡಿದ್ದು ಯಾಕೆ.? ಆವಾಗಲೇ ನನ್ನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಬಹುದಾಗಿತ್ತು. ವಿನಾಕಾರಣ ನನ್ನ ವಿರುದ್ಧ ಹಗುರಾವಾಗಿ ಮಾತನಾಡುವುದು ನಿಲ್ಲಿಸಿ. ಇಲ್ಲದಿದ್ದರೆ ನನ್ನಲ್ಲಿಯೂ ಏನು ತಾಕತ್ತಿದೆ ಎಂಬುದು ತೋರಿಸುವೆ ಎಂದು ಎಚ್ಚರಿಸಿದರು.
ಬೆಳಗ್ಗೆ ಒಂದು, ರಾತ್ರಿ ಒಂದು ಮಾತನಾಡುವ ಮಾಜಿ ಶಾಸಕ ಎಂಜಿ ಮುಳೆ ಅವರಿಗೆ ಜನರು ಹೇಗೆ ನಂಬಲು ಸಾಧ್ಯ ಎಂದು ಪ್ರಶ್ನಿಸಿದರು.