ಕಡೇಮನುಗನಹಳ್ಳಿ ಶಾಲೆಗೆ ಭೋಜನಾಲಯ

Published on

ಹನಗೋಡು: ಹೋಬಳಿಯ ನಾಗರಹೊಳೆ ಉದ್ಯಾನದಂಚಿನ ಕಡೇಮನುಗನಹಳ್ಳಿಯ ಸರಕಾರಿ ಪ್ರೌಢಶಾಲೆಗೆ ಮೈಸೂರಿನ ಸೌತ್ ಈಸ್ಟ್ ರೋಟರಿ ಸಂಸ್ಥೆಯು ನಿರ್ಮಿಸಿಕೊಟ್ಟಿರುವ ಭೋಜನಾಲಯವನ್ನು ರೋಟರಿಯ ಜಿಲ್ಲಾ ಗವರ್ನರ್ ಎಚ್.ಆರ್.ಕೇಶವ್ ಉದ್ಘಾಟಿಸಿದರು.

ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯ ಮೂಲ ಶಿಕ್ಷಣ ಹಾಗೂ ಸಾಕ್ಷರತೆ ಯೋಜನೆಯಡಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ ಸುಮಾರು 3 ಲಕ್ಷ ರೂ. ವೆಚ್ಚದಡಿ ಭೋಜನಾಲಯ ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ ಆದಿವಾಸಿ ಮಕ್ಕಳು ಸಹ ವ್ಯಾಸಂಗ ಮಾಡುತ್ತಿದ್ದು, ಎಲ್ಲಾ ಮಕ್ಕಳು ನೆಮ್ಮದಿಯಿಂದ ಕುಳಿತು ಊಟ ಮಾಡಲು ಸಹಕಾರಿಯಾಗಿದೆ. ಈ ಸೌಲಭ್ಯ ಕಲ್ಪಿಸಿರುವ ಸೌತ್ ಈಸ್ಟ್ ರೋಟರಿ ಸಂಸ್ಥೆಯ ಸೇವೆಯನ್ನು ಪ್ರಶಂಸಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ರೋ.ಕೆ.ಎನ್.ಮುರುಳಿಧರ್ ಮಾತನಾಡಿ, ಕಾಡಂಚಿನ ಈ ಸರಕಾರಿ ಶಾಲೆಗೆ ಅರಣ್ಯದಂಚಿನ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವ ಯೋಜನೆಯಡಿ ಸೌಲಭ್ಯ ಕಲ್ಪಿಸಿರುವ ಹೆಮ್ಮೆ ನಮ್ಮ ಸಂಸ್ಥೆಗಿದೆ. ಮುಂದೆ ಶಾಲೆಗೆ ಬ್ಯಾಂಡ್‌ಸೆಟ್ ನೀಡಲಾಗುವುದು ಎಂದರು.ಮುಖ್ಯಶಿಕ್ಷಕಿ

ಕೆ.ಟಿ.ಜಯಂತಿ ಮಾತನಾಡಿ, ಮೈಸೂರಿನ ರೋಟರಿ ಸಂಸ್ಥೆಯು ತಮ್ಮನ್ನು ಉತ್ತಮ ಶಿಕ್ಷಕಿಯೆಂದು ಗುರುತಿಸಿ ಸನ್ಮಾನಿಸಿದ ಸಮಾರಂಭದಲ್ಲಿ ತಾವು ಆದಿವಾಸಿ ಮಕ್ಕಳು ವ್ಯಾಸಂಗ ಮಾಡುವ ಕಾಡಂಚಿನ ಈ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದೆ. ಒಂದೇ ಬಾರಿಗೆ 120 ಜನ ಕುಳಿತು ಊಟ ಮಾಡಬಹುದಾದ ಸುಸಜ್ಜಿತ ಭೋಜನಾಲಯ ನಿರ್ಮಿಸಿಕೊಟ್ಟಿರುವುದಕ್ಕೆ ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ರೋಟರಿಸಂಸ್ಥೆ ಕಾರ್ಯದರ್ಶಿ ಎಸ್.ಟಿ.ಗಿರೀಶ್ ಸೇರಿದಂತೆ ಸಂಸ್ಥೆಯ ರೋಟರಿಯ ಪದಾಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್‌ಕುಮಾರ್, ಗೌರವಾಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net