

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಸ್ಥಾಪಿಸಲಾಗುವುದೆಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಲ್ಲಾಡಿ ತಿಳಿಸಿದರು. ಕಟ್ಟೆಮಳಲವಾಡಿ ಗ್ರಾಮ ಪಂಚಾಯಿತಿಯಿಂದ ಸಮಿತಿಗೆ ನೀಡಿರುವ 15080 ಅಡಿ ಅಳತೆಯ ನಿವೇಶನದಲ್ಲಿ 10 ಅಡಿ ಎತ್ತರದ ಪಂಚಲೋಹದಿಂದ ತಯಾರಿಸಿದ ಅಂಬೇಡ್ಕರ್ ಅವರ ಭವ್ಯ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಜತೆಯಲ್ಲಿ ಉದ್ಯಾನ, ಗ್ರಂಥಾಲಯ ನಿರ್ಮಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುತ್ಥಳಿಯೂ ಸೇರಿದಂತೆ ಒಟ್ಟು 1.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ನೀಲಿನಕ್ಷೆ ಸಿದ್ಧಪಡಿಸಿದ್ದು, ಪ್ರತಿಮೆಯನ್ನು ಉತ್ತರ ಪ್ರದೇಶದ ಮಾದರಿಯಲ್ಲಿ ನಿರ್ಮಿಸಲಾಗುವುದು. ಸೆ.10 ರಂದು ಭೂಮಿಪೂಜೆ ನೆರವೇರಲಿದ್ದು, ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ಡಿ.6ರ ಅಂಬೇಡ್ಕರ್‌ರ ಪರಿನಿರ್ವಾಣದ ದಿನದಂದು ಪ್ರತಿಮೆಯ ಲೋಕಾರ್ಪಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷ ನಿಂಗರಾಜ ಮಲ್ಲಾಡಿ ಮಾತನಾಡಿ, ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಪ್ರತಿಮೆಯನ್ನು ಕೊಡುಗೆಯಾಗಿ ನೀಡಲಿದ್ದಾರೆ. ಗ್ರಾಮದ ಪ್ರತಿಯೊಂದು ದಲಿತ ಕುಟುಂಬ ಹಾಗೂ ಗ್ರಾಮದ ಇತರ 17 ಸಮುದಾಯದವರೂ ಈ ಶುಭಕಾರ್ಯಕ್ಕೆ ನೆರವಾಗಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ನಟರಾಜ್, ನಿರ್ದೇಶಕರಾದ ತಗಡಯ್ಯ, ಸಂಜು, ದೇವೇಂದ್ರ, ಗಜೇಂದ್ರ ಇತರರಿದ್ದರು.