

ರಾಮಕೃಷ್ಣ ನಗರದ ನಟನ ರಂಗ ಮಂದಿರದಲ್ಲಿ ಏ.13 ರಂದು ಸಂಜೆ 6.30ಕ್ಕೆ ‘ಕಟ್ಟೆ ಪುರಾಣ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ನಟನ ರಂಗ ಶಾಲೆಯ 2024-25ನೇ ಸಾಲಿನ ರಂಗಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಮೂರನೇ ಅಭ್ಯಾಸಿ ಪ್ರಯೋಗ ಇದಾಗಿದೆ. ಬಿ.ಚಂದ್ರೇಗೌಡ ಅವರ ಅಂಕಣ ಆಧಾರಿತ ಈ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ.
70-80-90ರ ದಶಕಗಳಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣ ಬಯಲು ಸೀಮೆ ಕಟ್ಟೆ ಪುರಾಣ ಬೃಹತ್ ಸಂಚಲನವನ್ನೇ ಮೂಡಿಸಿತ್ತು. ಬಿ.ಚಂದ್ರೇಗೌಡ ಅವರು ಬರೆದ ಲೇಖನದ ಭಾಷೆ, ಸನ್ನಿವೇಶ, ವಿಚಾರಗಳು ಮಂಡ್ಯದ ನೆಲದ ಸೊಗಡಿಂದ ಹೊರಟು ಇಂಡಿಯಾದ ಪ್ರಸ್ತುತ ವಿದ್ಯಮಾನಗಳವರೆಗೆ ಹರಹಿಕೊಳ್ಳುತ್ತಿದ್ದ ರೀತಿ ಮತ್ತು ಚಿಂತನೆಗಳು ಕೆಣಕುವಂತಹುದು. ಆ ಕಾಲದ ಪ್ರಜ್ಞಾವಂತರಿಗೆ, ವಿಚಾರವಂತರಿಗೆ ದಿಕ್ಕು ತೋರಿದ ವಿಶಿಷ್ಟ ರೂಪಕಗಳು ಅದು. ಈ ಕಾಲಮಾನಕ್ಕೆ ನಿಂತು ನೋಡಿದರೂ ಅದರ ಪ್ರಸ್ತುತತೆಯ ಪ್ರಸ್ತುತಿ ಮನಸ್ಸಿಗೆ ಸಂತೋಷ ಕೊಡುವ, ಅಪಾರ ರಂಜನೆ ಇರುವ ನಟನದ ಈ ಹೊಸ ನಾಟಕ ಕಟ್ಟೆ ಪುರಾಣ.