ಕಟ್ಟಡ ನಿರ್ಮಾಣಕ್ಕೆ 6 ಲಕ್ಷ ರೂ. ಅನುದಾನ

8KDR1solder
ಕಡೂರು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ನಿವೃತ್ತ ಸೈನಿಕರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ಭಂಡಾರಿ ಶ್ರೀನಿವಾಸ್, ಶ್ರೀಕಾಂತ್, ಸಾಣೇಹಳ್ಳಿ ಆರಾಧ್ಯ, ಶೇಖರಪ್ಪ ಮತ್ತಿತರರಿದ್ದರು.
Published on

ಕಡೂರು: ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರಿಗೆ ಸಂಘದ ಮೂಲಕ ಕ್ರಿಯಾಶೀಲತೆಯಿಂದ ಕೂಡಿರಲು ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿನ ನಿವೃತ್ತ ನೌಕರರ ಸಂಘದ ಕಚೇರಿ ಮೇಲಂತಸ್ತಿನಲ್ಲಿ ತಮ್ಮ ಅನುದಾನದಡಿಯಲ್ಲಿ ನಿರ್ಮಾಣಗೊಳ್ಳುವ ನಿವೃತ್ತ ಸೈನಿಕರ ಸಂಘದ ಭವನದ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ತೊಡಗಿಸಿಕೊಳ್ಳುವ ನಿವೃತ್ತ ಸೈನಿಕರು ಸಂಘದ ಮೂಲಕ ಅನೇಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು ಈ ನಿಟ್ಟಿನಲ್ಲಿ ಸುಸಜ್ಜಿತ ಭವನ ನಿರ್ಮಾಣದ ಬೇಡಿಕೆ ಹೆಚ್ಚಾಗಿತ್ತು. ತಮ್ಮ ಅನುದಾನದಡಿ ಆರಂಭಿಕವಾಗಿ ಕಟ್ಟಡ ನಿರ್ಮಾಣಕ್ಕೆ 6 ಲಕ್ಷ ರೂ. ಅನುದಾನ ಒದಗಿಸಲಾಗಿದೆ ಎಂದರು.

ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಿವೃತ್ತ ಸೈನಿಕರ ಸಂಘದಿಂದ ನಿವೇಶನ ಕೋರಿ ಸಾಕಷ್ಟು ಮನವಿ ಬಂದಿದೆ. ಆದರೆ ನಿವೇಶನದ ಕೊರತೆ ಪರಿಣಾಮ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಬಳಿಕ ಮೇಲಂತಸ್ತಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಒತ್ತು ನೀಡಿರುವುದು ಸ್ವಾಗತಾರ್ಹ ಸಂಗತಿ. ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ಸೈನಿಕರಿಗಾಗಿ ಸ್ಮಾರಕ ಭವನ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ. ಇದಕ್ಕೆ ಶಾಸಕರ ಜತೆ ಚರ್ಚಿಸಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಪುರಸಭಾ ಸದಸ್ಯ ಶ್ರೀಕಾಂತ್, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶೇಖರಪ್ಪ, ಎಂ.ಎಂ.ವೀರೇಶ, ಮುಖಂಡ ಸಾಣೇಹಳ್ಳಿ ಆರಾಧ್ಯ, ಲಿಂಗರಾಜು ರೇವಣ್ಣ, ಗ್ರಾಪಂ ಸದಸ್ಯ ರಾಕೇಶ್ ಹಾಗೂ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net