ಓಣಂ ಸರ್ವರನ್ನೂ ಒಗ್ಗೂಡಿಸುವ ಹಬ್ಬ

vinay
ಎನ್.ಆರ್.ಪುರದಲ್ಲಿ ಏರ್ಪಡಿಸಿದ್ದ ತಾಲೂಕು ಕೇರಳ ಹಿಂದು ಸಮಾಜದ ಓಣಂ ಹಬ್ಬದಾಚರಣೆಯನ್ನು ವಿನಯ ಗುರೂಜಿ ಉದ್ಘಾಟಿಸಿದರು. ಪಿ.ಆರ್.ಸುಕುಮಾರ್, ಪಿ.ಆರ್.ಸದಾಶಿವ, ಶಿವದಾಸ್, ಕೆ.ಪಿ.ಸುರೇಶ್‌ಕುಮಾರ್ ಇದ್ದರು.
Published on

ಎನ್.ಆರ್.ಪುರ: ಸನಾತನ ಹಿಂದು ಧರ್ಮದಲ್ಲಿ ಗೌರಿ, ಗಣೇಶ, ಯುಗಾದಿ, ಓಣಂ ಸೇರಿ ಹಲವು ಹಬ್ಬಗಳು ಎಲ್ಲರನ್ನೂ ಒಗ್ಗೂಡಿಸಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದು ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿ ತಿಳಿಸಿದರು.
ಬಿ.ಎಚ್.ಕೈಮರದ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಕೇರಳ ಹಿಂದು ಸಮಾಜದ ಪ್ರಥಮ ವಾರ್ಷಿಕೋತ್ಸವ ಮತ್ತು ಓಣಂ ಹಬ್ಬದಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಲಯಾಳಿ ಭಾಷಿಕರು ಸ್ನೇಹಜೀವಿಗಳು. ಎನ್.ಆರ್.ಪುರದಲ್ಲಿ ಬರಡು ಭೂಮಿಯಲ್ಲಿ ಚಿನ್ನದ ಬೆಳೆ ತೆಗೆಯಲು ಮಲಯಾಳಿ ಭಾಷಿಕರು ಕಾರಣ. ನಮ್ಮ ಹೆತ್ತ ತಾಯಿ, ಮಾತೃ ಭಾಷೆ ಮರೆಯಬಾರದು. ಮಲಯಾಳಿ ಭಾಷಿಕರಲ್ಲಿ ಯಾವುದೇ ದ್ವೇಷ ಇಲ್ಲ. ನಮ್ಮ ಪೂರ್ವಜರ ಆಹಾರ, ಮನಸ್ಸು ಶುದ್ಧವಾಗಿತ್ತು. ಮುಂದಿನ ದಿನಗಳಲ್ಲಿ ಮಲಯಾಳಿ ಹಿಂದು ಸಮಾಜದವರಿಗೆ ನಮ್ಮ ಗೌರಿಗದ್ದೆಯ ಆಶ್ರಮದಿಂದ ಅಗತ್ಯ ಸಹಾಯ ಮಾಡುತ್ತೇನೆ. ನಿಮ್ಮ ಸಮಾಜದ 5 ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಕೇರಳ ಹಿಂದು ಸಮಾಜದ ಮುಖಂಡ, ವಕೀಲ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, ಹಿಂದು ಸನಾತನ ಹಬ್ಬಕ್ಕೆ ನೂರಾರು ಆಯಾಮಗಳಿವೆ. ಕೇರಳದ ಸಂಪ್ರದಾಯದ ಓಣಂ ವರ್ಣರಂಜಿತ ಹಬ್ಬ ಎಂದು ಬಣ್ಣಿಸಿದರು.
ಕೇರಳ ಹಿಂದು ಸಮಾಜದ ಉಪಾಧ್ಯಕ್ಷ ಸುಧಾಕರ ಆಚಾರ್ ಮಾತನಾಡಿ, ಕೇರಳ ಹಿಂದು ಸಮಾಜದಲ್ಲಿ ಜಾತಿ ಭೇದವಿಲ್ಲದೆ ಎಲ್ಲರೂ ಹಿಂದು ಎಂಬ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಸನಾತನ ಧರ್ಮದಲ್ಲಿ ವಸುಧೈವ ಕುಟುಂಬಕಂ ಎಂಬಂತೆ ಎಲ್ಲರೂ ಒಂದೇ ಎಂದು ಕೆಲಸ ಮಾಡುತ್ತಿದ್ದೇವೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಸಮಾಜದ ಮಕ್ಕಳನ್ನು ಪುರಸ್ಕರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೇರಳದ ಸಾಂಪ್ರದಾಯಿಕ ನೃತ್ಯ ಮಾಡಲಾಯಿತು. ಓಣಂ ಪ್ರಯುಕ್ತ ಹೂವಿನಿಂದ ಬರೆದ ರಂಗೋಲಿ (ಪೂಕಳಂ) ಗಮನ ಸೆಳೆಯಿತು. ವಿನಯ ಗುರೂಜಿ ಆಗಮಿಸಿದಾಗ ಚಂಡೆ ವಾದಕರು ಹಾಗೂ ಮಹಿಳೆಯರು ಕೇರಳ ಸಂಪ್ರದಾಯದಂತೆ ಕಲಶ ಹಿಡಿದು ಸ್ವಾಗತಿಸಿದರು.
ಕೇರಳ ಹಿಂದು ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸುಕುಮಾರ್, ಮುಖಂಡರಾದ ಕೆ.ಎನ್.ನಾಗರಾಜ್, ಬಿನು, ಮನೋಹರ್, ಕೆರೆಮನೆ ರತ್ನಾಕರ್, ಸಮಾಜದ ಸಂಚಾಲಕ ಪಿ.ಆರ್.ಅರವಿಂದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಪಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶೋಕ್, ಮುರಳೀಧರ, ಉಪಾಧ್ಯಕ್ಷ ಕೆ.ಜಿ.ಗಿರೀಶ್, ಭಾರತಿ ಅರವಿಂದಾಚಾರ್, ಮಾಲಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net