ಒಳ್ಳೆಯ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಿ

IMG-20230812-WA0259
ಹನಗೋಡು ಹೋಬಳಿಯ ಕಡೆಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಯಂತಿ, ನಾರಾಯಣಶೆಟ್ಟಿ, ಸೋಮಶೇಖರ್ ಇತರರು ಇದ್ದರು.
Published on

ಹನಗೋಡು: ಯುವ ಜನತೆ ದೇಶದ ಶಕ್ತಿಯಾಗಿದ್ದು, ಒಳ್ಳೆಯ ಮಾರ್ಗದರ್ಶನದಲ್ಲಿ ವಿದ್ಯಾವಂತರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಡೆಮನುಗನಹಳ್ಳಿ ಮುಖ್ಯಶಿಕ್ಷಕಿ ಜಯಂತಿ ಹೇಳಿದರು.

ಹನಗೋಡು ಹೋಬಳಿಯ ಕಡೆಮನುಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದೊಂದಿಗೆ ನಾಗರಿಕರು ಕೈ ಜೋಡಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನತೆ ಸಾಗಿದಾಗ ಸಂಸ್ಕಾರಯುತ ಸುಭಿಕ್ಷ ನಾಡು ನಿರ್ಮಾಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಹಾದಿ ತಪ್ಪುತ್ತಿರುವ ಯುವ ಜನತೆ ಜಾಗೃತರಾಗಿ ಒಳ್ಳೆಯ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಯೋಜನಾಧಿಕಾರಿ ನಾರಾಯಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾದಾಗ ಮಾತ್ರ ಕಲಿಕೆಯತ್ತ ಆಸಕ್ತಿ ವಹಿಸಬಹುದು. ಮೊಬೈಲ್‌ನಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಹಳ್ಳಿಗಳಲ್ಲಿ ದುಶ್ಚಟಗಳಿಗೆ ಮಾರಿ ಹೋಗಿರುವ ವ್ಯಕ್ತಿಗಳನ್ನು ಗುರುತಿಸಿ ಅಂತಹವರಿಗೆ ಮಾರ್ಗದರ್ಶನ ನೀಡಿ ಸರಿದಾರಿಯಲ್ಲಿ ಸಾಗಲು ತಿಳಿಹೇಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಸೋಮಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳೇಗೌಡ, ಜಿಲ್ಲಾ ಜನಜಾಗೃತಿ ಸದಸ್ಯ ದಾ.ರಾ.ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಕುಮಾರ್, ಧರ್ಮಸ್ಥಳ ಸಂಸ್ಥೆ ಮೇಲ್ವಿಚಾರಕಿ ಸುನಂದಾ, ಮುಖಂಡ ಗವಿಮಾದು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net