

ಚಿತ್ರದುರ್ಗ: ಒಳಮೀಸಲು ಜಾರಿ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದು ಮೀಸಲಾತಿ ವಂಚಿತರಿಗೆ ನ್ಯಾಯ ಕೊಡಿಸುವ ಕೆಲಸಕ್ಕೆ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂದು ಸಮುದಾಯದ ಮುಖಂಡರು, ಸ್ವಾಮೀಜಿ ಘೋಷಿಸಿದರು.
ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮುದಾಯಕ್ಕೆ ಮುಖಂಡರು ಭರವಸೆ ನೀಡಿದರು.
ಹಿರಿಯೂರು ಆದಿಜಾಂಬವ ಗುರುಪೀಠದ ಶ್ರೀ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಿಎಂ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ವಿಶ್ವಾಸವಿದೆ. ಅನುಷ್ಠಾನಕ್ಕೆ ಮುಂದಾಗದಿದ್ದಲ್ಲಿ ಸಂಘಟನಾತ್ಮಕವಾಗಿ ರಾಜ್ಯಾದ್ಯಂತ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಸಂಸದ ಗೋವಿಂದ ಎಂ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಸೇರಿ ಅನೇಕ ಮುಖಂಡರು ಕೂಡ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.