ಹುಣಸೂರು: ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕೆಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಜೆ.ಮಹದೇವ್ ಆಗ್ರಹಿಸಿದರು.
ಒಳಮೀಸಲಾತಿಗಾಗಿ ಮಾದಿಗ ಸಮಾಜ 30 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದೆ. ಆದರೆ ಆಳುವ ಸರ್ಕಾರಗಳು ಸಮಾಜದ ಬೇಡಿಕೆಯನ್ನು ಈಡೇರಿಸದೆ ಅನ್ಯಾಯವೆಸಗಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇತ್ತೀಚೆಗೆ ಜರುಗಿದ ದಲಿತರ ಐಕ್ಯತಾ ಸಮಾವೇಶದಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸುವಂತೆ ನಿರ್ಣಯಿಸಲಾಗಿದೆ. ಒಳ ಮೀಸಲಾತಿ ಬೇಡಿಕೆಗೆ ಎಡ-ಬಲ ಸಮುದಾಯಗಳು ಒಟ್ಟಿಗೆ ಹೆಜ್ಜೆ ಇಟ್ಟಿವೆ. ಹಾಗಾಗಿ ಒಳ ಮೀಸಲಾತಿಯ ಪರ ಹೋರಾಟಕ್ಕೆ ಹೊಸ ಚೈತನ್ಯ ಬಂದಿದೆ. ಒಳಮೀಸಲಾತಿ ಕಲ್ಪಿಸುವ ಕುರಿತು ಪ್ರಸ್ತುತ ನಡೆಯತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದು ಕಾಲಹರಣದ ತಂತ್ರವಷ್ಟೇ ಎಂದವರು ಟೀಕಿಸಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಶಿವಕುಮಾರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಕಲ್ಪಿಸುತ್ತೇನೆಂದು ನೀಡಿದ್ದ ಭರವಸೆ ಹುಸಿಯಾಗಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸುವ ಮೂಲಕ ನಮ್ಮ ಬೇಡಿಕೆ ಈಡೇರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ್, ಸಣ್ಣಮಾದಯ್ಯ, ರಾಯನಹಳ್ಳಿ ಸ್ವಾಮಿ ಇತರರು ಇದ್ದರು.