

ಬ್ರಾಹ್ಮಣರು ಸಂಘಟಿತರಾಗಬೇಕಾದರೆ ಒಳಪಂಗಡ ಬಿಟ್ಟು ಒಗ್ಗೂಡಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನದ ಅಡಿ ಸದಸ್ಯತ್ವ ಪಡೆದ ವಿಪ್ರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ಮೈಸೂರು ಭಾಗದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಾಗಲು ವಿಪ್ರರು ಮುಂದಾಗಬೇಕಿದೆ. ವಿಪ್ರರಲ್ಲಿ ಒಗ್ಗಟ್ಟು ಮೂಡಬೇಕಾದರೆ ಒಳಪಂಗಡ ಪ್ರತಿಷ್ಠೆ ತ್ಯಜಿಸಿ ತ್ರಿಮತಸ್ಥರೆಲ್ಲ ಒಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮೈಸೂರಿನಲ್ಲಿ ಕಚೇರಿ ತೆರೆಯುವಲ್ಲಿ ಮುಂದಾದರೆ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಲು ಅನುಕೂಲವಾಗಲಿದ್ದು, ಗ್ರಾಮಾಂತರ ಮಟ್ಟದಲ್ಲೂ ಬ್ರಾಹ್ಮಣ ಚಟುವಟಿಕೆಗಳು ಸಂಘಟಿಸಬಹುದು ಎಂದರು.
ಇದೇ ವೇಳೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಕರಾದ ನಂ.ಶ್ರೀಕಂಠಕುಮಾರ್, ಎನ್.ಎಂ. ನವೀನ್‌ಕುಮಾರ್, ಅನಿಲ್ ಕುಮಾರ್, ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.
ಇಳೈ ಆಳ್ವಾರ್ ಸ್ವಾಮಿ, ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್, ನಗರಪಾಲಿಕ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಎಂ.ಆರ್.ಬಾಲಕೃಷ್ಣ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್.ಶ್ರೀಧರರ್ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಜಯ್ ಕುಮಾರ್ ಇತರರಿದ್ದರು.