

ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿ 87 ದಿನ ಪೂರ್ಣಗೊಂಡಿದೆ. ಆದರೆ, ರಾಜ್ಯದಲ್ಲಿ ಕೋರ್ಟ್ ತೀರ್ಪು ಇನ್ನೂ ಜಾರಿಯಾಗಿಲ್ಲ ಎಂಬ ಕೂಗು ದಿನದಿನಕ್ಕೂ ಬಲಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ.
ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಯಿಂದ ನಡೆಯುವ ಸಂಪುಟ ಸಭೆಯ ಅಜೆಂಡಾದಲ್ಲಿ ಒಳ ಮೀಸಲು ವಿಚಾರ ಅಡಕಗೊಂಡಿಲ್ಲ. ಇಷ್ಟರ ನಡುವೆಯೂ ಹೆಚ್ಚುವರಿ ಚರ್ಚಾ ವಿಷಯವಾಗಿ ಪರಿಗಣನೆಯಾಗಲೂ ಬಹುದು. ಅಲ್ಲದೇ ಉಪ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಅಥವಾ ನಿರ್ಣಯ ಕೈಗೊಂಡರೂ ಅದನ್ನು ಬಹಿರಂಗಪಡಿಸದ ಸ್ಥಿತಿಯಲ್ಲಿ ಸರ್ಕಾರವಿದೆ.
ಒಳ ಮೀಸಲು ಸಂಬಂಧ ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ರಾಜ್ಯದ ಉದ್ದಗಲಕ್ಕೂ ಹೋರಾಟ ನಡೆದಿದೆ. ಸರ್ಕಾರಕ್ಕೂ ಅದರ ಬಿಸಿ ತಾಗಿದೆ. ಹೀಗಾಗಿ ಪೂರಕವಾದ ನಿರ್ಣಯ ತೆಗೆದುಕೊಂಡು ಸಂದೇಶವನ್ನಂತೂ ಕಳಿಸುವ ಅನಿವಾರ್ಯತೆಗೆ ಸಿಲುಕಿದೆ. ಆ ಪ್ರಕಾರ ಒಳ ಮೀಸಲು ಜಾರಿ ವರೆಗೂ ಸರ್ಕಾರದ ಎಲ್ಲ ನೇಮಕ ತಡೆ ಹಿಡಿಯುವ ಹಾಗೂ ದತ್ತಾಂಶ ಸಂಗ್ರಹ ನೆಪದಲ್ಲಿ ತಜ್ಞರ ಸಮಿತಿಯಂತಹ ತೀರ್ಮಾನ ಮಾಡುವ ಸಾಧ್ಯತೆ ಹೆಚ್ಚಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಒಳ ಮೀಸಲಾತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಎಸ್‌ಸಿ ಮತ್ತು ಎಸ್‌ಟಿಗಳಲ್ಲಿಯೇ ಒಳ ಮೀಸಲಾತಿ ನೀಡಬಹುದು ಮತ್ತು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಜಾರಿಗೆ ತರಬಹುದು ಎಂದು ಹೇಳಿರುವುದು ಪರಿಶಿಷ್ಟ ಸಮುದಾಯದಲ್ಲಿ ಹೊಸ ಹುರುಪು ತಂದಿದೆ. ಇದೇ ವೇಳೆ ಸುಪ್ರಿಂಕೋರ್ಟ್ ತೀರ್ಪು ಜಾರಿ ಮಾಡುವುದಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಅಸಮಾಧಾನ ಹುಟ್ಟಿಕೊಳ್ಳಲೂ ಕಾರಣವಾಗಿದೆ. ಸಂಪುಟ ಸದಸ್ಯರಲ್ಲಿಯೂ ಪೂರ್ಣ ಸಹಮತ ಇಲ್ಲದ ಕಾರಣ ನಿರ್ಣಯ ಮಾಡಲು ಹಿಂದೇಟು ಹೊಡೆಯುವಂತಾಗಿದೆ.