ಒಳ ಮೀಸಲು ಸಮೀಕ್ಷೆ ಅವಧಿ 28ರವರೆಗೆ ವಿಸ್ತರಣೆ

CTD JAGADISH HEBBALLI....
Published on

ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲು ವರ್ಗೀಕರಣ ಸಂಬಂಧ ದತ್ತಾಂಶ ಸಂಗ್ರಹಣೆಗೆ ಕೈಗೊಂಡಿರುವ ಸಮೀಕ್ಷೆ ಕಾರ್ಯದ ಅವಧಿಯನ್ನು ಮೇ 28ರವರೆಗೆ ವಿಸ್ತರಿಸಲಾಗಿದೆ.

ಒಳ ಮೀಸಲು ಜಾರಿಗೆ ರಾಜ್ಯ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ಡಾ.ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗ ಕಳೆದ ಮೇ 5ರಿಂದ ಸಮೀಕ್ಷೆ ಆರಂಭಿಸಿತ್ತು.

ಸರ್ಕಾರದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಸೂಚಿಸಿರುವಂತೆ ಸಮೀಕ್ಷೆಯ ಅವಧಿಯನ್ನು 28ರವರೆಗೆ ವಿಸ್ತರಿಸಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಒಟ್ಟಾರೆ ಸಮೀಕ್ಷೆ ಕಾರ್ಯ ಮೇ 23ರವರೆಗೆ ನಡೆಯಬೇಕಿತ್ತು.

ಪರಿಷ್ಕೃತ ವೇಳಾಪಟ್ಟಿಯಂತೆ ಮೊದಲನೇ ಹಂತದಲ್ಲಿ ಮನೆ, ಮನೆ ಭೇಟಿ ನೀಡಿ ಕೈಗೊಳ್ಳುವ ಸಮೀಕ್ಷಾ ಕಾರ್ಯ 25ರವರೆಗೆ ಜರುಗಲಿದೆ. 2ನೇ ಹಂತದಲ್ಲಿ, ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು ಮನೆ-ಮನೆ ಭೇಟಿ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಿಸುವ ಕಾರ್ಯ 28ರವರೆಗೆ ಹಾಗೂ 3ನೇ ಹಂತದಲ್ಲಿ ಸ್ವಯಂ ಘೋಷಣೆ ಮಾಡಿ, ಆನ್‌ಲೈನ್ ಮೂಲಕ ನಡೆಯುವ ಸಮೀಕ್ಷೆ ಕಾರ್ಯವೂ ಮೇ 28ರವರೆಗೆ ಜರುಗಲಿದೆ.

ಸಾರ್ವಜನಿಕರು ಪರಿಷ್ಕೃತ ವೇಳಾಪಟ್ಟಿ ಅನ್ವಯ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಕುಟುಂಬದ ಸಂಪೂರ್ಣ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net