ಒಳ ಮೀಸಲು ಜಾರಿಯಾಗದಿದ್ದರೆ ಸರ್ಕಾರ ಉಳಿಯಲ್ಲ

Narayanaswamy
Published on

ಚಿತ್ರದುರ್ಗ: ಕರ್ನಾಟಕದಲ್ಲಿ ಒಳಮೀಸಲು ಜಾರಿಯಾಗದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಮಾದಿಗ ಸಮುದಾಯ ದಂಗೇ ಏಳಲಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಎರಡೂವರೆ ತಿಂಗಳೊಳಗೆ ಒಳ ಮೀಸಲಾತಿ ಅನುಷ್ಠಾನವಾಗದಿದ್ದರೆ, ರಾಜಸ್ತಾನ, ಮಹಾರಾಷ್ಟ್ರದ ಮಾದರಿ ಹೋರಾಟ ಶುರುವಾಗಲಿದೆ ಎಂದು ಎಚ್ಚರಿಸಿದರು.

ಅಧಿಕಾರಕ್ಕೆ ಬಂದು 19 ತಿಂಗಳು ಕಳೆದರೂ ಪ್ರಣಾಳಿಕೆಯಲ್ಲಿ ಹೇಳಿದಂತೆ ಮೀಸಲು ಜಾರಿಗೆ ಸರ್ಕಾರ ವಿಫಲವಾಗಿದೆ.ಸಿದ್ದರಾಮಯ್ಯ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಉಪಚುನಾವಣೆ ಕಾರಣಕ್ಕೆ ಆಯೋಗ ರಚಿಸಿದ್ದಾರೆ ಹೊರತು ಸಿಬ್ಬಂದಿ ನೇಮಿಸಿಲ್ಲ. ಕಚೇರಿ, ಕುರ್ಚಿ, ಟೇಬಲ್ ಏನನ್ನೂ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿಗರು ಒಳಮೀಸಲು ವಿಚಾರದಲ್ಲಿ ಮಾದಿಗರನ್ನು ಮೂರ್ಖರನ್ನಾಗಿ ಮಾಡಲಿಲ್ಲ. ಬದಲಿಗೆ ಅವರೇ ಮೂರ್ಖರಾಗಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಪಿ.ಎಂ.ನರೇಂದ್ರಸ್ವಾಮಿ ಪ್ರತಿಕ್ರಿಯೆಯೇ ಇದಕ್ಕೆ ನಿದರ್ಶನ. ಇನ್ನೂ ಸಿಎಂ ಆಗಲಿ, ಸಚಿವರಾಗಲಿ ಸದನದಲ್ಲಿ ಭರವಸೆ ನೀಡಿಲ್ಲ. ನುಡಿದಂತೆ ನಡೆದಿದ್ದೇವೆಂದು ಹೇಳುವ ಯೋಗ್ಯತೆ ಯಾವ ಸಚಿವರಿಗೂ ಇಲ್ಲ. ಸರ್ಕಾರ ನಡೆಸುವವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಸಮಾಜದವರನ್ನು ಜೀತದಾಳು ಅಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದ ನಾರಾಯ ಣಸ್ವಾಮಿ, ಒಳ ಮೀಸಲಾತಿಗಾಗಿ ಡಿ. 16ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ನಡೆಯಲಿದೆ. 21ರಂದು ಹುಬ್ಬಳ್ಳಿಯಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.

ಇಡೀ ದಕ್ಷಿಣ ಭಾರತದಲ್ಲೇ ಮಾದಿಗರ ಸಂಘಟನೆ ಆಗಲಿದೆ. ನಮ್ಮವರು ಕೈ-ಕಟ್ಟಿ ಕುಳಿತಿಲ್ಲ. ಸಮಾಜದ ವಿರುದ್ಧ ಷಡ್ಯಂತ್ರ ಮಾಡೋ ಸರ್ಕಾರ ಕಿತ್ತೊಗೆಯುತ್ತೇವೆ. ಕರ್ನಾಟಕದಲ್ಲಿನ ಹೋರಾಟಕ್ಕೆ ನಾನೇ ನೇತೃತ್ವ ವಹಿಸುತ್ತೇನೆ. ನನ್ನ ಮೇಲೆ ಎಷ್ಟು ಪ್ರಕರಣ ಬೇಕಾದರೂ ದಾಖಲಿಸಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net