

ಒಳ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಹಿನ್ನೆಲೆಯಲ್ಲಿ ದತ್ತಾಂಶ ಸಂಗ್ರಹಿಸಲು ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಲು ರಾಜ್ಯ ಸರ್ಕಾರ ಕಳೆದ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಶೋಷಿತ ವರ್ಗಗಳನ್ನು ದಿಕ್ಕು ತಪ್ಪಿಸುವ ಕೆಲಸವಾಗಿದೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಆಕ್ಷೇಪಿಸಿದ್ದಾರೆ.
ಯಾವ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸಂಬಂಧಪಟ್ಟಂತೆ ಒಳ ಮೀಸಲಾತಿ ನೀಡುವ ಉದ್ದೇಶದಿಂದ ದತ್ತಾಂಶ ಸಂಗ್ರಹಿಸಿದ್ದರೆ, ಅಂತಹ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಜಾರಿಗೆ ತರಬಹುದು. ಆದರೆ, ರಾಜಕೀಯ ಇಚ್ಛೆಗೆ ಅನುಗುಣವಾಗಿ ಯಾವುದೇ ರಾಜ್ಯ ಆಂತರಿಕ ಮೀಸಲಾತಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಸದಾಶಿವ ಆಯೋಗದ ವರದಿ ಮತ್ತು ಮಾಧುಸ್ವಾಮಿ ಸಂಪುಟ ಉಪ ಸಮಿತಿ ವರದಿ, ಮೀಸಲಾತಿ ವಿಂಗಡಣೆ ಇದ್ದರೂ ಈಗ ಸಮಿತಿ ನೇಮಕ ಮಾಡಲು ನಿರ್ಧರಿಸಿರುವುದು ಕೇವಲ ಉಪ ಚುನಾವಣೆಯಲ್ಲಿ ಮಾದಿಗ ಸಮುದಾಯದ ಮತ ಪಡೆದು, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನಡೆಸಿದ ಹುನ್ನಾರವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಾಶಿವ ವರದಿ ಹಾಗೂ ಮಾಧುಸ್ವಾಮಿ ಉಪ ಸಮಿತಿ ದತ್ತಾಂಶ ಸಂಗ್ರಹಿಸಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಆದ್ದರಿಂದ ಈಗ ಮತ್ತೆ ಅನಗತ್ಯವಾಗಿ ಉಪ ಸಮಿತಿ ರಚನೆ ನಿರ್ಧಾರ ವೋಟ್ ಬ್ಯಾಂಕ್ ರಾಜಕಾರಣದ ಉದ್ದೇಶದ್ದಾಗಿದೆ ಎಂದು ಆರೋಪಿಸಿದರು.
ಪದಾಧಿಕಾರಿಗಳಾದ ಎಂ.ಶಿವಕುಮಾರ್, ದಾಸಯ್ಯ, ಎಲ್.ಬೂದಿತಿಟ್ಟು ರಾಜೇಂದ್ರ, ಚಂದ್ರಸೇನ ಸಾಗರ್ ಹಾಗೂ ಸುರೇಂದ್ರ ಇದ್ದರು.