

ಕೊಡೇಕಲ್: ಕರೊನಾ ಮತ್ತು ಒಮಿಕ್ರಾನ್ ವೈರಸ್ ಬಗ್ಗೆ ನಿರ್ಲಕ್ಷೃ ವಹಿಸದೇ, ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಜಾಗ್ರತೆ ವಹಿಸಬೇಕು ಎಂದು ಶಾಸಕ ನರಸಿಂಹ ನಾಯಕ ಹೇಳಿದರು.
ಹುಣಸಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್ನಿಂದ ಮೃತಪಟ್ಟಿರುವ ಕುಟುಂಬ ಸದಸ್ಯರುಗಳಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಅವರು, ಎಲ್ಲರೂ ಸರ್ಕಾರದ ಮಾರ್ಗಸೂಚಿಗಳ ಪಾಲನೆ ಮಾಡಬೇಕು. ಇನ್ನು ಲಸಿಕೆಯನ್ನು ಪಡೆದುಕೊಳ್ಳದವರು ಕೂಡಲೇ ತೆಗೆದುಕೊಳ್ಳಬೇಕು. ಕರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಕೋವಿಡನಿಂದ ಮೃತಪಟ್ಟ 7 ಕುಟುಂಬ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಲಾಯಿತು. ಯುವ ಮುಖಂಡ ಹನುಮಂತ ನಾಯಕ, ಉಪತಹಸೀಲ್ದಾರ್ ಬಸವರಾಜ ಬಿರಾದಾರ, ಡಾ.ಬಸನಗೌಡ ಅಳ್ಳಿಕೋಟಿ, ಮಲ್ಲು ನವಲಗುಡ್ಡ, ಗ್ರಾಮಲೆಕ್ಕಾಧಿಕಾರಿ ದೇವು ಚವ್ಹಾಣ್, ಶಾಂತಪ್ಪ, ಬಸವರಾಜ ಅಂಗಡಿ, ಸದಾನಂದ ನಾಶಿ ಇತರರಿದ್ದರು.