

ಚಿತ್ರದುರ್ಗ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಚಿಂತನೆ ರಾಜ್ಯ ಸರ್ಕಾರದಲ್ಲಿದ್ದು, ಇದು ಐತಿಹಾಸಿಕ ನಿರ್ಧಾರವಾಗಲಿದೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.
ತರಾಸು ರಂಗಮಂದಿರದಲ್ಲಿ ರಾಜ್ಯ ಉರ್ದು ಶಿಕ್ಷಕರ ಅಸೋಸಿಯೇಷನ್ಸ್‌ನಿಂದ ಮಂಗಳವಾರ ನಡೆದ ರಾಜ್ಯಮಟ್ಟದ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಫಾತಿಮಾ ಶೇಖ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಸೇರಿ ಸರ್ಕಾರಿ ನೌಕರರ ಹಲವು ವರ್ಷಗಳ ಬೇಡಿಕೆಯಾಗಿರುವ ಒಪಿಎಸ್ ಜಾರಿಗೆ ಈಗಾಗಲೇ ತಜ್ಞರ ಸಭೆ, ಚರ್ಚೆಗಳು ನಡೆದಿವೆ. ಮಾತಿಗೆ ತಪ್ಪದೆ, ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಸಿಎಂ, ಡಿಸಿಎಂ ಕೂಡ ನಿಮ್ಮ ಪರವಾಗಿದ್ದಾರೆ ಎಂದರು.
ರಾಜ್ಯದ 4ಸಾವಿರ ಉರ್ದು ಶಾಲೆಗಳಲ್ಲಿ 18 ಸಾವಿರ ಶಿಕ್ಷಕರಿದ್ದಾರೆ. ಮೂಲಸೌಲಭ್ಯ, ಶಿಕ್ಷಕರ ಕೊರತೆ ನೀಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶೈಕ್ಷಣಿಕ ವರ್ಷದೊಳಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಎಸ್ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಅದರಲ್ಲಿ 20 ಶಾಲೆಗಳಲ್ಲಿ ಉರ್ದು ತರಗತಿಗೆ ವ್ಯವಸ್ಥೆ ಮಾಡಲಾಗುವುದು. ಹಾಜರಾತಿ ಹೆಚ್ಚಾದರೆ, ಜಿಲ್ಲೆಗೊಂದು ಪ್ರತ್ಯೇಕ ಶಾಲೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಎಂಎಲ್ಸಿ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ರಾಜ್ಯದಲ್ಲಿ ಉರ್ದು ಶಾಲೆಗಳು ಸಾಕಷ್ಟು ಸಮಸ್ಯೆಗೆ ಸಿಲುಕಿವೆ. ಜಿಲ್ಲೆಯಲ್ಲಿ 9 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ಸೌಲಭ್ಯವಿಲ್ಲದೆ, ಕಾರ್ಯನಿರ್ವಹಿಸುತ್ತಿವೆ. ಮನೆಯಲ್ಲಿ ಇರಲಾರದೆ, ಮಕ್ಕಳು ಶಾಲೆಗೆ ಬರುವಂತಾಗಿದೆ ಎಂದು ಬೇಸರಿದರು.
ಕನ್ನಡ, ಇಂಗ್ಲಿಷ್, ಉರ್ದು ಭಾಷೆ ಶಿಕ್ಷಕರ ನೇಮಕ ಶೀಘ್ರ ಆಗಬೇಕಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಇಕ್ಬಾಲ್ ಹುಸೇನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ, ಶಿವಮೊಗ್ಗ ಜಿಪಂ ಮಾಜಿ ಅಧ್ಯಕ್ಷೆ ಬಲ್ಕೀಸ್ ಬಾನು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಮಾರುತೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿದಾಯತ್ ಉಲ್ಲಾ ಷರೀಫ್, ಉರ್ದು ಇಸಿಒ ಸೈಯ್ಯದಾ ಸಮೀರಾ ಇತರರಿದ್ದರು.