ಒತ್ತುವರಿಯಾಗಿದ್ದ ಆಸ್ಪತ್ರೆ ಜಾಗ ತೆರವು

20HDK01
Published on

ಎಚ್.ಡಿ.ಕೋಟೆ: ಒತ್ತುವರಿಯಾಗಿದ್ದ ಸರ್ಕಾರಿ ಆಸ್ಪತ್ರೆ ಜಾಗವನ್ನು ತಹಸೀಲ್ದಾರ್ ಆರ್.ಮಂಜುನಾಥ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಸೋಮವಾರ ತೆರವುಗೊಳಿಸಲಾಯಿತು.

ಪಟ್ಟಣದ ಕೇಂದ್ರಸ್ಥಾನದ ಸರ್ಕಾರಿ ಆಸ್ಪತ್ರೆಯ ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 12 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಯಿತು.

ಆಸ್ಪತ್ರೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ತಾಲೂಕು ಆಡಳಿತದ ವಶಕ್ಕೆ ಪಡೆಯಬೇಕು ಎಂದು ತಾಲೂಕು ದಸಂಸ ಮುಖಂಡರು ಪ್ರತಿಭಟನೆ ಮಾಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ತಹಸೀಲ್ದಾರ್ ಆರ್. ಮಂಜುನಾಥ್ ಅವರಿಗೆ ಆದೇಶ ನೀಡಿ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಅದರಂತೆ ಸೋಮವಾರ ಬೆಳಗ್ಗೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಒತ್ತುವರಿಯಾಗಿದ್ದ 12 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಯಿತು.

ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಪುಟ್ಟಸ್ವಾಮಿ, ಪಟ್ಟಣ ಠಾಣೆ ಸಬ್‌ಇನ್ಸ್‌ಪೆಕ್ಟರ್ ಎಂ.ನಾಯಕ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು.

ರಸ್ತೆ ಬಿಡಲು ಒತ್ತಾಯ:
ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕೃಷ್ಣಪುರ ಗ್ರಾಮಸ್ಥರು ಈ ರಸ್ತೆ ಮೂಲಕ ನಮ್ಮ ಗ್ರಾಮಕ್ಕೆ ಹೋಗುತ್ತಿದ್ದು, ಮತ್ತೆ ಇದೇ ಮಾರ್ಗವಾಗಿ ಹೋಗಲು ರಸ್ತೆ ಬಿಡುವಂತೆ ಗ್ರಾಮದ ಪರಶಿವಮೂರ್ತಿ, ಮಹೇಂದ್ರ ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ವೇಳೆ ದಸಂಸ ಮುಖಂಡರು ಅಧಿಕಾರಿಗಳ ಜತೆ ವಾಗ್ವಾದಕ್ಕೆ ಇಳಿದು ಅಮಾಯಕರು ಒತ್ತುವರಿ ಮಾಡಿಕೊಂಡ ಜಾಗವನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. ಆದರೆ, ಇಲ್ಲಿನ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಆಸ್ಪತ್ರೆ ಜಾಗ ಮತ್ತು ಸರ್ಕಾರಿ ಕರಾಬ್ ಜಾಗವನ್ನು ತೆರವುಗೊಳಿಸುತ್ತಿಲ್ಲ. ಇದು ಅಧಿಕಾರಿಗಳ ತಾರತಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಮಹೇಶ್, ಪುರಸಭೆ ಮುಖ್ಯಾಧಿಕಾರಿ ವಿಜಯಕುಮಾರ್, ಸರ್ವೇ ಮೇಲ್ವಿಚಾರಕ ಮುನಿಸ್ವಾಮಿ, ಸರ್ವೇಯರ್ ನಾಗರಾಜು, ರಾಜೇಂದ್ರ ಪ್ರಸಾದ್, ಮುಖಂಡರಾದ ಚಾ.ಶಿವಕುಮಾರ್, ಯಶವಂತ, ಮಹೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net