ಒಗ್ಗಟ್ಟಿನಿಂದ ಬಿಸಿಎಂ ಕೇಂದ್ರ ಸ್ಥಾಪನೆ

27 kyalanur 03 bcm kendra udgatane kadahalli
Published on

ಕ್ಯಾಲನೂರು: ಈ ಹಿಂದೆ ಸಂಘದಲ್ಲಿ ಒಗ್ಗಟಿನ ಕೊರತೆಯಿದ್ದು, ಅಧ್ಯಕ್ಷ, ಉಪಾಧ್ಯಕ್ಷರನ್ನು ಸರಿಪಡಿಸಿಕೊಂಡು ಪ್ರಸ್ತುತ ಒಗ್ಗಟ್ಟು ಪ್ರದರ್ಶಿಸಿದ ಹಿನ್ನೆಲೆಯಲ್ಲಿ 2000 ಲೀಟರ್ ಸಾಮರ್ಥ್ಯದ ಬಿಎಂಸಿ ಕೇಂದ್ರ ಸ್ಥಾಪನೆ ಸಾಧ್ಯವಾಗಿದೆ ಎಂದು ಕೋಲಾರ ಹಾಲು ಒಕ್ಕೂಟ ನಿರ್ದೇಶಕ ಡಿ.ವಿ.ಹರೀಶ್ ಹೇಳಿದರು.

ಕೋಲಾರ ತಾಲೂಕಿನ ಕಾಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಗುರುವಾರ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿ, 1400-2500 ಲೀಟರ್ ಹಾಲು ಸಂಗ್ರಹಿಸುವ ಕೇಂದ್ರ ಸಂಚಾರ ವ್ಯವಸ್ಥೆಯಿಲ್ಲದೆ ಹಾಲಿನ ಉತ್ಪನ್ನ ಮಾರಾಟವಾಗದೆ ನಷ್ಟ ಹೊಂದಿತ್ತು. ಸರ್ಕಾರ ಒಕ್ಕೂಟವನ್ನು ವಿಭಜಿಸಿ ಆದೇಶ ಹೊರಡಿಸಿದ್ದು, ರಾಜಕೀಯ ಇಚ್ಛಾಶಕ್ತಿಯಿಂದ ಒಕ್ಕೂಟ ವಿಂಗಡಣೆಯಾಗಬಾರದು. ರೈತರ, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ವಿಭಜನೆಯಾಗಬೇಕು ಎಂದರು.

ಒಕ್ಕೂಟದಿಂದ ಸಂಘಕ್ಕೆ ಸೌಕರ್ಯ ಕಲ್ಪಿಸಲು ಸಹಕಾರ ನೀಡುತ್ತೇನೆ. ಸಹಕಾರ ಸಂಘ ಇಲ್ಲದ ಗ್ರಾಮಗಳನ್ನು ಗುರುತಿಸಿ ಸಂಘ ಸ್ಥಾಪನೆಗೆ ಒತ್ತು ನೀಡಲಾಗುವುದು. ರೈತರ ಸಬಲೀಕರಣಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿ ದರದಲ್ಲಿ ಸಾಲ ಕಲ್ಪಿಸಲಾಗುವುದು ಎಂದರು.

ಕೋಲಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಸಹಕಾರ ಸಂಘಗಳಿಂದ ರೈತರಿಗೆ ಸೌಲಭ್ಯ ಕಲ್ಪಿಸಲು ಸಾಧ್ಯ ಎಂಬುದಕ್ಕೆ ಡಿಸಿಸಿ ಬ್ಯಾಂಕ್, ಒಕ್ಕೂಟ ಸಾಕ್ಷಿ. ಆಡಳಿತ ಮಂಡಳಿ ಒಗ್ಗಟ್ಟಿನಿಂದ ಇದ್ದಾಗ ಸಹಾಯ ಮಾಡಲು ಸಾಧ್ಯ ಎಂದರು.

ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ ಮಾತನಾಡಿ, ಕಾಡಹಳ್ಳಿಗೆ ಬಿಎಂಸಿ ಕೇಂದ್ರ ಬಹುದಿನದ ಕನಸಾಗಿತ್ತು. ಪ್ರಸ್ತುತ ಆಡಳಿತ ಮಂಡಳಿ ಹಠದಿಂದ ಕೇಂದ್ರ ಸ್ಥಾಪನೆಯಾಗಿದ್ದು, ರೈತರು ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಿಬಿರ ಕಚೇರಿ ಪ್ರಭಾರಿ ಉಪವ್ಯವಸ್ಥಾಪಕರಾದ ಶ್ರೀಧರಮೂರ್ತಿ, ಮಹೇಶ್, ತಾಂತ್ರಿಕ ಅಧಿಕಾರಿ ತಿಪ್ಪಾರೆಡ್ಡಿ, ಅಮ್ಮನಲ್ಲೂರು ಗ್ರಾಪಂ ಅಧ್ಯಕ್ಷೆ ವನಿತಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಶ್ರೀನಿವಾಸ್ ರೆಡ್ಡಿ, ಗ್ರಾಪಂ ಸದಸ್ಯರಾದ ಕೆ.ಎನ್.ಶ್ರೀನಿವಾಸ್, ವೆಂಕಟಲಕ್ಷ್ಮಮ್ಮ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಂ.ವಾನರಾಸಪ್ಪ, ಉಪಾಧ್ಯಕ್ಷ ದೇವರಾಜು, ಸದಸ್ಯರಾದ ಮಂಜುನಾಥ, ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net