ಒಂದೇ ದಿನ 37 ಜನರಿಗೆ ಕರೊನಾ ಪಾಸಿಟಿವ್ : ಹೋಳಿ ಹಬ್ಬ ಆಚರಣೆ ನಿಷೇಧಿಸಿದ ಜಿಲ್ಲಾಡಳಿತ

corona image 1
Published on

ವಿಜಯಪುರ : ಜಿಲ್ಲೆಯಲ್ಲಿ ಮತ್ತೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡಿದೆ. ಬುಧವಾರ 37 ಜನರಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ. ಇನ್ನೂ ವಸತಿ ಶಾಲೆಗೂ ಮಹಾಮಾರಿ ವಕ್ಕರಿಸಿದ್ದು, ಶಾಲೆ-ಕಾಲೇಜು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಇಂಡಿ ತಾಲೂಕಿನ ಮರಗೂರಿನ ಮುರಾರ್ಜಿ ವಸತಿ ಶಾಲೆಯಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಕರೊನಾ ಸೋಂಕು ದೃಢವಾಗಿದೆ. ಈ ವರೆಗೆ 14,857 ಜನರಿಗೆ ಸೋಂಕು ತಗುಲಿದೆ. ಇನ್ನೂ ಬುಧವಾರ 8 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಈ ವರೆಗೆ 14,456 ಜನರು ಗುಣಮುಖರಾಗಿದ್ದಾರೆ. ಒಟ್ಟು 3,59,325 ಜನರ ಗಂಟಲುದ್ರವ ಪರೀಕ್ಷಿಸಲಾಗಿದ್ದು, ಅದರಲ್ಲಿ 3,42,126 ಜನರ ವರದಿ ನೆಗೆಟಿವ್ ಬಂದಿದೆ. * ವಿಜಯಪುರ ನಗರದಲ್ಲೇ ಹೆಚ್ಚು ಜಿಲ್ಲೆಯಲ್ಲಿ ಪ್ರತಿದಿನ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲಿ ವಿಜಯಪುರ ನಗರ ಮುಂಚೂಣಿಯಲ್ಲಿದೆ. ವಿಜಯಪುರ ತಾಲೂಕಿನಲ್ಲಿ ಈ ವರೆಗೆ 5,928, ಬಬಲೇಶ್ವರ 214, ತಿಕೋಟಾ 227, ಬ.ಬಾಗೇವಾಡಿ 1,501, ಕೊಲ್ಹಾರ 478, ನಿಡಗುಂದಿ 221, ಇಂಡಿ 1,376, ಚಡಚಣ 176, ಮುದ್ದೇಬಿಹಾಳ 1,980, ತಾಳಿಕೋಟೆ 584, ಸಿಂದಗಿ 1,589, ದೇವರ ಹಿಪ್ಪರಗಿ 141, ಇತರ ಜಿಲ್ಲೆಯ 442 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

  • ಹೋಳಿ ಹಬ್ಬ ಆಚರಣೆ ನಿಷೇಧ
    ಕರೊನಾ 2ನೇ ಅಲೆ ಹೆಚ್ಚಳದಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಹೋಳಿಹಬ್ಬ ಆಚರಣೆಯನ್ನು ನಿಷೇಧಿಸಿ ಬುಧವಾರ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಆದೇಶಿಸಿದ್ದಾರೆ.
    ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಮಾ.28ರಿಂದ 31ರ ವರೆಗೆ ನಡೆಯಲಿರುವ ಹೋಳಿ ಹಬ್ಬವನ್ನು ನಿಷೇಧಿಸಲಾಗಿದೆ. ಧಾರ್ಮಿಕ ಪೂಜೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸುವ ಮಾರ್ಗಸೂಚಿಯನ್ನು ಪಾಲಿಸಬೇಕು. ನಿರ್ಲಕ್ಷೃವಹಿಸಿದ್ದಲ್ಲಿ ಸಾಂಕ್ರಾಮಿಕ ರೋಗ ಕಾಯ್ದೆ-1897, ವಿಪತ್ತು ನಿರ್ವಹಣಾ ಕಾಯ್ದೆ-2005ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net