

ಕಡೂರು: ಗ್ರಾಮದ ಐಪಿಸೆಟ್‌ಗಳಿಗೆ ಸಮರ್ಪಕವಾದ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಮೆಸ್ಕಾಂ ಅಧಿಕಾರಿಗೆ ಚಿಕ್ಕನಾಯ್ಕನಹಳ್ಳಿ ಗ್ರಾಮಸ್ಥರು ಸೋಮವಾರ ಒತ್ತಾಯಿಸಿದರು.
ಗ್ರಾಮದ ಮುಖಂಡ ಕಲ್ಲೇಗೌಡ ಮಾತನಾಡಿ, ಕಳೆದ 4 ತಿಂಗಳಿಂದ ಐಪಿಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡದೆ ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದು ಸಮಸ್ಯೆಯ ಬಗ್ಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
7 ಗಂಟೆಗಳ ಕಾಲ ನೀಡಬೇಕಾದ ವಿದ್ಯುತ್ ಸರಬರಾಜಿನಲ್ಲಿ ಕನಿಷ್ಠ ಒಂದು ತಾಸು ನೀಡದೆ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ನಿರ್ಲಕ್ಷ್ಯತನ ವಹಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ವಹಿಸುವಂತೆ ಮೆಸ್ಕಾಂ ಎಇಇಗೆ ಆಗ್ರಹಿಸಿದರು.
ಮೆಸ್ಕಾಂ ಎಇಇ ತಿರುಪತಿನಾಯ್ಕ ಮಾತನಾಡಿ, ಓವರ್‌ಲೋಡ್‌ನ ತಾಂತ್ರಿಕ ಸಮಸ್ಯೆ ಬಗೆಹರಿಸಿ ವಿದ್ಯುತ್ ಸರಬರಾಜಿಗೆ ಕ್ರಮ ವಹಿಸುವಂತೆ ಕಿರಿಯ ಅಭಿಯಂತರರಿಗೆ ಸೂಚಿಸಿದರು. ಕೆಲವು ಸಣ್ಣಪುಟ್ಟ ಅಡಚಣೆಗಳನ್ನು ಒಂದೆರಡು ದಿನಗಳಲ್ಲಿ ಬಗೆಹರಿಸಿ ಸಮರ್ಪಕ ವಿದ್ಯುತ್ ಸರಬರಾಜು ಮಾಡಲಾಗುವುದು. ರೈತರು ಆತಂಕಗೊಳ್ಳುವುದು ಬೇಡ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಹಾಲಿಂಗಪ್ಪ, ಸುಪ್ರಿತ್, ಸತೀಶ್, ಆನಂದ್, ಹರೀಶ್, ಕಾರ್ತಿಕ್ ಮತ್ತಿತರರಿದ್ದರು