ಬೆಂಗಳೂರು: ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿದ್ದ ಯುವಕನ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು, ಮಾರಕಾಸಗಳನ್ನು ತೋರಿಸಿ ಚಿನ್ನಾಭರಣ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಹೊಮ್ಮ ದೇವನಹಳ್ಳಿ ನಿವಾಸಿ ದೇವರಾಜು ಕೊಟ್ಟ ದೂರಿನ ಮೇರೆಗೆ ಕೃಷ್ಣ ಮತ್ತು ಇನ್ನೋರ್ವ ಆಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿರುವ ಹುಳಿಮಾವು ಠಾಣೆ ಪೊಲೀಸರು, ಬಂಧನಕ್ಕೆ ಬಲೆ ಬೀಸಿದ್ದಾರೆ.
ದೇವರಾಜು ಸೆ.20ರಂದು ರಾತ್ರಿ 11 ಗಂಟೆಯಲ್ಲಿ ತನ್ನ ಮನೆಯಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿದ್ದರು. ಈ ವೇಳೆ ಅಪರಿಚಿತನೋರ್ವ ಮನೆಯ ಬಾಗಿಲು ಬಡಿದು ತೆಗೆಯುವಂತೆ ಹೇಳಿದ್ದ. ಮಾತನಾಡಿಸಲು ಬಾಗಿಲು ತೆಗೆಯುತ್ತಿದ್ದಂತೆ ಮಾರಾಕಾಸ ಹಿಡಿದು ಒಳ ನುಗ್ಗಿ, ಕುತ್ತಿಗೆಗೆ ಇಟ್ಟಿದ್ದ. ಇದೇ ವೇಳೆ ಮತ್ತೋರ್ವ ಆರೋಪಿ ಬಂದು ಥಳಿಸಿ, ಕಿರುಚಾಡಿದರೆ ಮಾರಕಾಸದಿಂದ ಹೊಡೆದು ಸಾಯಿಸುವುದಾಗಿ ಬೆದರಿಸಿದ್ದ. ಹಣ ಕೊಡುವಂತೆ ಒತ್ತಾಯಿಸಿದ್ದು, ದೇವರಾಜು ತನ್ನಲ್ಲಿ ಹಣವಿಲ್ಲ ಎಂದಿದ್ದ.
ಈ ವೇಳೆ ಕೃಷ್ಣ ಎಂಬುವನು ದೇವರಾಜು ಅವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಮತ್ತೋರ್ವ ಆರೋಪಿ ಮನೆಯಲ್ಲಿ ಶೋಧಿಸಿ, ಎಲ್‌ಸಿಡಿ ಟಿವಿ, 5 ಮೊಬೈಲ್, ಚಿನ್ನದ ಸರ, ಚಿನ್ನದ ಉಂಗುರ, ಬಟ್ಟೆ ಹಾಗೂ ಶೂಗಳನ್ನು ದೋಚಿದ್ದರು. ಬಳಿಕ ದೇವರಾಜುನನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಬಾಗಿಲು ಮುಚ್ಚಿ ಪರಾರಿಯಾಗಿದ್ದಾರೆ. ದೇವರಾಜು ರಕ್ಷಣೆಗಾಗಿ ಕಿಟಕಿಯಲ್ಲಿ ಕೂಗಿಕೊಂಡಾಗ ನೆರೆ ಹೊರೆಯವರು ಬಂದು ಬಾಗಿಲು ತೆರೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ಕೃತ್ಯ ನಡೆದ ಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳ ಮುಖಚಹರೆ ಸೆರೆಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.