

ತರೀಕೆರೆ: ಹೊಸ ಗಂಗೂರು ಸೇತುವೆ ಕಾಮಗಾರಿ ಕಳೆದ ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜತೆಗೆ ಕಾಮಗಾರಿ ಕಳಪೆಯಾಗಿದೆ. ಸಂತವೇರಿ ಘಾಟಿ ಬಳಿ ಹಾದು ಹೋಗಿರುವ ಬಾಗಲಕೋಟೆ-ಬಿಳಿಗಿರಿ ರಂಗನಬೆಟ್ಟ ರಾಜ್ಯಹೆದ್ದಾರಿಯಿಂದ ಹೊಸ ಮತ್ತು ಹಳೇ ಗಂಗೂರು, ಮೆಟ್ಟೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದು ಹಾಗೂ ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಗೆ ಹತ್ತಿರವಾಗಲಿದೆ ಎಂದು ಸರ್ಕಾರ ಕೆಆರ್‌ಡಿಸಿಎಲ್ ಯೋಜನೆ ಮೂಲಕ 2018ನೇ ಸಾಲಿನಲ್ಲಿ 10.12 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಗಂಗೂರು ಸೇತುವೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ.
2022ನೇ ಸಾಲಿನ ಅಂತ್ಯಕ್ಕೆ ಪೂರ್ಣವಾಗಬೇಕಿದ್ದ ಕಾಮಗಾರಿ ಕೆಆರ್‌ಡಿಸಿಎಲ್ ಯೋಜನೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷೃದಿಂದ ಅಪೂರ್ಣವಾಗಿ ಉಳಿದಿದೆ. ಕೆಆರ್‌ಡಿಸಿಎಲ್ ಯೋಜನೆ ಪ್ಯಾಕೇಜ್‌ನಲ್ಲಿ ಬಿಡುಗಡೆಯಾದ ಕೋಟಿಗಟ್ಟಲೇ ಹಣ,100 ಮೀ. ಉದ್ದ ಮತ್ತು 6.79 ಮೀ. ಅಗಲದ ಸೇತುವೆ ನಿರ್ಮಾಣದ ಜತೆ 200 ಮೀ.ಉದ್ದದ ಕೂಡು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಒಳಗೊಂಡಿತ್ತು. ಜನರಲ್ಲಿ ಹೆಚ್ಚಿದ ಆತಂಕ
ಹೊಸ ಸೇತುವೆ ನಿರ್ಮಾಣವಾದರೆ ಮಳೆಗಾಲದಲ್ಲಿ ಎದುರಾಗುವ ಪರದಾಟ ತಪ್ಪಲಿದೆ ಎನ್ನುವ ಆಶಾಭಾವನೆಯಲ್ಲಿದ್ದ ಹೊಸ ಮತ್ತು ಹಳೇ ಗಂಗೂರು ಗ್ರಾಮದ ಜನತೆ ಜತೆ ವಿವಿಧ ಊರುಗಳ ಶಾಲೆಗೆ ನಿತ್ಯ ಹೋಗಿ ಬರುವ ಮಕ್ಕಳ ಕನಸು ಭಗ್ನವಾಗಿದೆ. ಅಲ್ಲದೆ ಅಪೂರ್ಣ ಸೇತುವೆ ಮುಕ್ತಾಯಕ್ಕೂ ಮುನ್ನವೇ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಅದರಡಿ ಓಡಾಡುವ ಜನರಲ್ಲಿ ಆತಂಕ ಮನೆ ಮಾಡಿದೆ. ಪಾರದರ್ಶಕ ತನಿಖೆಯಾಗಲಿ
ಹೊಸ ಗಂಗೂರು, ಹಳೆ ಗಂಗೂರು, ಮೆಟ್ಟೂರು ಇನ್ನಿತರ ಗ್ರಾಮಗಳ ಜನರ ಬಹುದಿನಗಳ ಕನಸಾಗಿದ್ದ ಹೊಸ ಗಂಗೂರು ಸೇತುವೆ ನಿರ್ಮಾಣ ಕಾಮಗಾರಿ 2022ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಗುತ್ತಿಗೆದಾರ ಶೇ.50ರಷ್ಟು ಕಾಮಗಾರಿ ಮುಗಿಸಿ ಯೋಜನೆಗೆ ಮೀಸಲಿರಿಸಿದ್ದ ಉಳಿದ ಹಣ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಕೆಲಸ ಮಗಿಯುವ ಮುಂಚೆಯೇ ಗುತ್ತಿಗೆದಾರನಿಗೆ ಕೋಟ್ಯಂತರ ರೂ. ಹಣ ಅಕ್ರಮವಾಗಿ ಪಾವತಿಸಿರುವ ಕೆಆರ್‌ಡಿಸಿಎಲ್ ಅಧಿಕಾರಿಗಳ ವಿರುದ್ಧ ಪಾರದರ್ಶಕ ತನಿಖೆ ನಡೆಸಿದದರೆ ನನೆಗುದಿಗೆ ಬಿದ್ದ ಕಾಮಗಾರಿಗೂ ಮರುಜೀವ ಬರಲಿದೆ.