

ಬೆಳಗಾವಿ:‘ಬಡವರಿಗೆ, ಶೋಷಿತರಿಗೆ ನ್ಯಾಯಯುತ ರಕ್ಷಣೆ ಒದಗಿಸುವ ಪ್ರತಿಜ್ಞೆ ಸ್ವೀಕರಿಸಿ ಖಾಕಿ ತೊಟ್ಟಿದ್ದೇವೆ. ಆದರೆ, ಇಲ್ಲಿ ಸ್ಮಗ್ಲಿಂಗ್ ಗೋಲ್ಡ್ ಕಳ್ಳತನದ ‘ಕಿಂಗ್‌ಪಿನ್’ ಜತೆಗೂಡಿ ಹಣಹೀರುವ ಇಲಾಖೆಯ ದೊಡ್ಡವರ ಧೋರಣೆಯಿಂದ ನಾವು ರೋಸಿ ಹೋಗಿದ್ದೇವೆ…’ಇದು, ಹೆಸರು ಹೇಳಲು ಇಚ್ಛಿಸದ ಪಿಎಸ್‌ಐ ಒಬ್ಬರು ಅಸಮಾಧಾನದಿಂದ ಇಲಾಖೆಯಲ್ಲಿನ ಅವ್ಯವಸ್ಥೆ ಬಗ್ಗೆ ‘ವಿಜಯವಾಣಿ’ಯೊಂದಿಗೆ ಅಳಲು ತೋಡಿಕೊಂಡ ಪರಿ.
‘ಆತನ ಪ್ರಭಾವ, ಒತ್ತಡದಿಂದಾಗಿ ನಾವು ಉದ್ಯೋಗ ಉಳಿಸಿಕೊಳ್ಳಲು, ಅವರು ಮಾಡಬಾರದನ್ನೆಲ್ಲ ಮಾಡುತ್ತಿದ್ದರೂ ಕುರುಡರಂತೆ ಇರಬೇಕಾಗಿದೆ. ವಿರೋಧಿಸಿದರೆ ನಾವೇ ಆ ಪ್ರಕರಣದ ಅಪರಾಧಿಗಳಾಗುತ್ತೇವೆ. ಅಷ್ಟರ ಮಟ್ಟಿಗೆ ತೆರೆಮರೆಯಲ್ಲಿ ಆತನ ಮಾತು ಇಲಾಖೆಯಲ್ಲಿ ನಡೆಯತ್ತದೆ. ಛೇ, ಇಂಥದ್ದನ್ನೆಲ್ಲ ಪೋಷಿಸಲು ನಾವು ಹಗಲು ರಾತ್ರಿ ಓದಿ ಕಷ್ಟಪಟ್ಟು ಖಾಕಿ ತೊಟ್ಟಿದ್ದಾ…?’
ಎಳೆಎಳೆಯಾಗಿ ವಿವರ: ಕಿರಣ ಎಂಬಾತನ ಉಪಟಳ ಪ್ರಾಮಾಣಿಕ ಅಧಿಕಾರಿಗಳಿಗೆ ಸಹಿಸಲು ಆಗುತ್ತಿಲ್ಲ. ಸಮಾಜಘಾತುಕ ಚಟುವಟಿಕೆ ಸದೆಬಡೆಯುವಲ್ಲಿ ಕೆಳಸ್ತರದ ಸಿಬ್ಬಂದಿಗೆ ಧೈರ್ಯ ನೀಡಿ, ಹುರಿದುಂಬಿಸಬೇಕಿದ್ದ ಹಿರಿಯ ಅಧಿಕಾರಿಗಳು ಹಣದಾಹಕ್ಕಾಗಿ ಪಿಎಸ್‌ಐ, ಎಎಸ್‌ಐಗಳನ್ನು ಬಲಿಪಶು ಮಾಡಿದರೆ ಹೇಗೆ? ನಮ್ಮ ಮೇಲೆ ಈಗ ನಡೆಯುತ್ತಿರುವ ದೌರ್ಜನ್ಯ ನಮ್ಮ ನಂತರ ಇಲ್ಲಿಗೆ ಬರುವ ಸಿಬ್ಬಂದಿ ಮೇಲೆ ನಡೆಯದಿರಲಿ ಎಂಬ ಕಾರಣಕ್ಕೆ ಮಾಹಿತಿ ನೀಡುತ್ತಿದ್ದೇನೆ. ಇಲಾಖೆ ಅಧಿಕಾರಿಗಳ ಜತೆ ಸೇರಿ ಕಿರಣ ಎಸಗುವ ಅಕ್ಕಿ, ಹಾಲಿನ ಪೌಡರ್ ಡೀಲಿಂಗ್ ಹಾಗೂ ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಿರುವ ಮತ್ತು ಮುಚ್ಚಿಹಾಕುವ ಪರಿಯನ್ನು ಆ ಪಿಎಸ್‌ಐ ಎಳೆಎಳೆಯಾಗಿ ವಿವರಿಸಿದರು.
ಸಿಬ್ಬಂದಿಗಳೆಲ್ಲ ಗಪ್‌ಚುಪ್: ಈ ಕೃತ್ಯ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ಗಡಿ ಭಾಗಗಲ್ಲಿ ಮಾತ್ರ ಚಿನ್ನಾಭರಣ ಹಾಗೂ ಹವಾಲಾ ಹಣ ದಂಧೆ ನಡೆಯುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಹಾಲಿನ ಪೌಡರ್, ಅಕ್ಕಿ, ಸ್ಟೀಲ್ ಸಾಗಣೆ ಮೇಲೆ ಡೀಲಿಂಗ್ ನಡೆಯುತ್ತದೆ. ಈ ಬಗ್ಗೆ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲವೂ ಸತ್ಯ. ಆದರೆ, ಅದೆಲ್ಲವನ್ನೂ ಮುಚ್ಚಿ ಹಾಕುವಲ್ಲಿ ಆತನ ಪ್ರಭಾವ ಯಶಸ್ಸು ಕಂಡರೂ ಅಚ್ಚರಿಯಿಲ್ಲ. ಹೀಗಾಗಿಯೇ ಈ ಎಲ್ಲ ವಿಷಯ ಗೊತ್ತಿದ್ದರೂ ನೂರಾರು ಸಿಬ್ಬಂದಿ ಗಪ್‌ಚುಪ್ ಇದ್ದಾರೆ ಎಂದರು.
ಪತ್ರಕರ್ತರೂ ಎಚ್ಚರಿಕೆಯಿಂದ ಇರಬೇಕು: ನಾವಾದರೂ ಏನು ಮಾಡಲು ಸಾಧ್ಯ? ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ. ಸ್ವತಃ ನ್ಯಾಯ ಕಂಡುಕೊಳ್ಳಲಾಗದ ನಮ್ಮಿಂದ ಜನತೆಗೆ ಹೇಗೆ ನ್ಯಾಯ ಒದಗಿಸಲು ಸಾಧ್ಯ? ನಿಜಕ್ಕೂ ನಾವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯಲ್ಲಿದ್ದೇವೆಯೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಅಲ್ಲದೆ, ನಿಮಗೆ ಆನ್‌ಲೈನ್ ಕಾಲ್ ಮಾಡಲು ಕಾರಣ ಏನಂದ್ರೆ, ಪತ್ರಕರ್ತರ ಮೊಬೈಲ್ ನಂಬರ್‌ಗೂ ಈಗಾಗಲೇ ಸಿವಿಆರ್ (್ಚಟ್ಚಜಿಠಿ/್ಚಚ್ಝ್ಝ ಟಜ್ಚಿಛಿ ್ಟಛ್ಚಿಟ್ಟಜ್ಞಿಜ)ಅಳವಡಿಸಿದ್ದಾರೆ. ಹೀಗಾಗಿ ನೀವು ಎಚ್ಚರಿಕೆಯಿಂದ ಇರಬೇಕು ಎಂದು ಹತಾಶೆಯ ಧ್ವನಿಯಿಂದಲೇ ಆ ಪಿಎಸ್‌ಐ ಆನ್‌ಲೈನ್ ಧ್ವನಿ ನಿಂತಿತು. ಪ್ರಕರಣದ ಬೆನ್ನುಹತ್ತಿರುವ ಕೆಲ ಪತ್ರಕರ್ತರ ಸುದ್ದಿಮೂಲಗಳೂ ಸೋಮವಾರದಿಂದ ಆನ್‌ಲೈನ್ ಮೊರೆ ಹೋಗಿದ್ದಾರೆ. ಇದೂ ಆ ಕಿಂಗ್‌ಪಿನ್ ಕಿರಣನ ಪ್ರಭಾವ ಈಗಲೂ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ.
ಮುಂದಿನ ಕ್ರಮ ಏನು?: ಸ್ಮಗ್ಲಿಂಗ್ ಚಿನ್ನ ಕಳ್ಳತನ ಹಾಗೂ ವಾಹನ ಬಿಡುಗಡೆಗೆ ಹಣ ಪಡೆದು ಬಳಿಕ ಅದನ್ನು ಹಿಂದಿರುಗಿಸಿದ್ದರ ಬಗ್ಗೆ ಚಿನ್ನದ ಅಸಲಿ ಮಾಲೀಕ ತಿಲಕ್ ಪೂಜಾರಿ ಎಂಬಾತನ ವಿಚಾರಣೆ ನಡೆಯಬೇಕಿದೆ. ಆದರೆ, ಎ್ಐಆರ್ ದಾಖಲಿಸುವ ಬಗ್ಗೆಯೂ ಆತ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ ಮೂಲ ಪ್ರಕರಣಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಠಾಣೆಯಲ್ಲೇ ಎ್ಐಆರ್ ದಾಖಲಿಸಬೇಕು. ಬಳಿಕ ಸಿಐಡಿಗೆ ವರ್ಗಾಯಿಸಿಕೊಳ್ಳುವಂತೆ ತಂಡದಲ್ಲಿನ ಕೆಲವರು ಇಂಗಿತ ವ್ಯಕ್ತಪಡಿಸಿದ್ದು, ಮುಂದಿನ ಕ್ರಮ ಏನು ಎನ್ನುವುದನ್ನು ಕಾದು ನೋಡಬೇಕಿದೆ.
ಐಜಿಪಿ ಕಚೇರಿ ಬಳಿಯೇ ಹವಾಲಾ ಕಮಿಷನ್?:‘ಹೈವೇ ದಲಾಲ್’ ಕುಖ್ಯಾತಿಯ ಕಿಂಗ್‌ಪಿನ್ ಕಿರಣ ಮಾಹಿತಿಯಂತೆ ಅಥವಾ ನಿರ್ದೇಶನದಂತೆಯೋ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಚಿನ್ನದ ಕಳ್ಳತನ ಪ್ರಕರಣ ದಾಖಲಾಗಿತ್ತು. ಬಳಿಕ ಬೆಳಗಾವಿಯಲ್ಲೇ ಹವಾಲಾ ಹಣ ಸಾಗಿಸುತ್ತಿದ್ದ ಕಾರು ಜಪ್ತಿಮಾಡಿ, 60 ಲಕ್ಷ ರೂ. ಎಗರಿಸಿದ್ದಾರೆ ಎಂಬ ಮತ್ತೊಂದು ಆರೋಪ ಇದೀಗ ಕೇಳಿ ಬಂದಿದೆ.
ಉತ್ತರ ವಲಯದ ಐಜಿಪಿ ಕಚೇರಿ ಮತ್ತು ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ಸಮೀಪದಲ್ಲಿಯೇ ಕಾರೊಂದನ್ನು ಹಲವು ದಿನ ನಿಲ್ಲಿಸಿಕೊಂಡಿದ್ದರು. ಮಹಾರಾಷ್ಟ್ರದ ಸಾಂಗ್ಲಿ ಮೂಲದ ಹವಾಲಾ ಏಜೆಂಟನಿಗೆ ಸೇರಿದ್ದ ಆ ಕಾರಿನಲ್ಲಿ ಒಟ್ಟು 2.5 ಕೋಟಿ ರೂ. ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ. ಹೊನಗಾ ಅಥವಾ ಹಿರೇಬಾಗೇವಾಡಿ ಟೋಲ್ ಬಳಿಯಲ್ಲಿ ಕಾರು ಜಪ್ತಿ ಮಾಡಿರುವ ಬಗ್ಗೆ ಬಲವಾದ ಅನುಮಾನ ಮೂಡಿದೆ. ಈ ಬಗ್ಗೆಯೂ ಸಿಐಡಿ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಲಿದೆ.
ಕೊಲೆ ಪ್ರಕರಣದ ದಿಕ್ಕನ್ನೇ ಬದಲಿಸಿದ್ದ: ಉನ್ನತ ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ, ಬೆಳಗಾವಿ ಐಜಿಪಿ ವ್ಯಾಪ್ತಿಯ ಬಸವನಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಮೂಗು ತೂರಿಸಿದ್ದ ರೇಂಜ್ ಅಧಿಕಾರಿ ಜತೆ ಕಿರಣ ಲಕ್ಷಾಂತರ ಹಣ ಪಡೆದು ಪ್ರಕರಣದ ದಿಕ್ಕನ್ನೇ ತಿರುಚಿದ್ದರು. ಅಂದು ವಿಚಾರಣಾಧಿಕಾರಿಯಾಗಿದ್ದ ಪಿಎಸ್‌ಐ ನೇರವಾಗಿಯೇ ಇದನ್ನು ವಿರೋಧಿಸಿದ್ದು, ಒತ್ತಡ ಹೇರಿದ್ದು, ಇಲಾಖೆಯಲ್ಲಿ ಭಾರಿ ಚರ್ಚೆಯಾಗಿತ್ತು.
ಜಮಖಂಡಿ ಠಾಣೆ ಹಾಗೂ ಮಹಾನಿಂಗಪುರದಲ್ಲಿಯೂ ಈತನ ಪ್ರಭಾವ ಕೆಲಸ ಮಾಡಿದೆ. ಕ್ಷೀರಭಾಗ್ಯದ ಹಾಲಿನ ಪೌಡರ್, ಅನ್ನಭಾಗ್ಯ ಹಾಗೂ ಎ್ಸಿಎ ಯಿಂದ ಪಡೆದ ಅಕ್ಕಿ ಸಾಗಣೆಯಲ್ಲೂ ಈತ ುಡ್ ಇನ್‌ಸ್ಪೆಕ್ಟರ್‌ಗಳ ಮೇಲೆ ಒತ್ತಡ ತಂದು ಪ್ರಕರಣ ದಾಖಲಿಸಿ ಯಶ ಕಂಡಿದ್ದನು. ಮುಂದೆ ಅನುಮತಿ ಪಡೆಯಲು ಹಣ ಪೀಕಿ ಹಂಚಿಕೊಳ್ಳಲಾಗಿತ್ತು ಎನ್ನಲಾಗಿದೆ. ಅದೆಲ್ಲದರ ಹಿಂದಿನ ಬಂಡವಾಳ ಇದೀಗ ಬಯಲಾಗುತ್ತಿದ್ದು, ಸಿಐಡಿ ಅಧಿಕಾರಿಗಳು ವಸ್ತುನಿಷ್ಠ ತನಿಖೆ ಮಾಡಬೇಕು ಎನ್ನುತ್ತಾರೆ ಇಲಾಖೆಯ ಕೆಳಸ್ತರದ ಅಧಿಕಾರಿಗಳು.
| ರವಿ ಗೋಸಾವಿ