ಏಣಗಿ ಬಾಳಪ್ಪ ಸ್ಮರಣೋತ್ಸವ ನಾಳೆಯಿಂದ

5dvk 7
Published on

ಬೆಳಗಾವಿ: ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಕೇಂದ್ರ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೆಹರೂ ನಗರದ ಕನ್ನಡ ಭವನದಲ್ಲಿ ನ.7ರಿಂದ 9ರ ವರೆಗೆ ಏಣಗಿ ಬಾಳಪ್ಪ ಅವರ ಸ್ಮರಣೋತ್ಸವ ಆಯೋಜಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಝಾಕೀರ್ ನದಾಫ್ ತಿಳಿಸಿದರು.

ನಗರದಲ್ಲಿ ಬುಧವಾರ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಣಗಿ ಬಾಳಪ್ಪ ಸ್ಮರಣೆಯ ಜತೆಗೆ ಈಚೆಗೆ ಅಗಲಿದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ, ರಂಗ ಕಲಾವಿದರಾದ ಯಶವಂತ ಸರದೇಶಪಾಂಡೆ, ರಾಜು ತಾಳಿಕೋಟೆ, ಅನ್ನಪೂರ್ಣಾ ಮಳಗಲಿ ಹಾಗೂ ಡಿ.ಹನಮಕ್ಕ ಅವರಿಗೆ ಈ ಕಾರ್ಯಕ್ರಮ ಅರ್ಪಿಸಲಾಗುತ್ತಿದೆ ಎಂದು ಹೇಳಿದರು.

ಪ್ರತಿದಿನವೂ ಸಂಜೆ 6.30ಕ್ಕೆ ನಾಟಕೋತ್ಸವದ ಪ್ರಯುಕ್ತ ವಿವಿಧ ತಂಡಗಳಿಂದ ನಾಟಕ ಪ್ರದರ್ಶನ ಪ್ರಸ್ತುತಪಡಿಸಲಾಗುತ್ತದೆ. 7ರಂದು ರಂಗಸಂಪದ ತಂಡದಿಂದ ‘ನಕ್ಷತ್ರ ಯಾತ್ರಿಕರು’ ಹಾಗೂ ನಮ್ಮ ಸಂಘಟನೆಯ ಕಲಾವಿದರಿಂದ 8ರಂದು ಹಾಲು ಬಟ್ಟಲದೊಳಗಿನ ಪಾಲು ಮತ್ತು 9ರಂದು ನೆಲಮುಗಿಲು ನಾಟಕ ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಯ.ರು.ಪಾಟೀಲ, ರಂಗಸೃಷ್ಟಿ ತಂಡದ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಶಿವಾನಂದ ತಾರಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net