ಏಡ್ಸ್‌ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ: ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ ಸಲಹೆ

RMGM-Photo-01-Arogya Sibira Bidadi College -Programme Photo-22-12-2021
Published on

ರಾಮನಗರ: ಏಡ್ಸ್ ರೋಗಕ್ಕೆ ಯುವಪೀಳಿಗೆ ಹೆಚ್ಚು ಬಲಿಯಾಗುತ್ತಿದ್ದು, ಜಾಗೃತರಾಗಬೇಕಿದೆ. ಜತೆಗೆ ಏಡ್ಸ್‌ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕುವಾರ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ಬಿಡದಿಯ ಜ್ಞಾನ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ, ಕೋವಿಡ್ ನಿಯಂತ್ರಣ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಚ್‌ಐವಿ / ಏಡ್ಸ್ ವೈರಸ್‌ನಿಂದ ಬರುವ ಕಾಯಿಲೆಯಾಗಿದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ ಅರ್ಜಿತ ರೋಗ ಲಕ್ಷಣಗಳ ಕೂಟವನ್ನು ಉಂಟುಮಾಡುತ್ತದೆ. ಇದು ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷಿಸದೇ ರಕ್ತ ಪಡೆಯುವುದು, ಸೋಂಕಿತ ತಾಯಿಯಿಂದ ಮಗುವಿಗೆ, ಸಂಸ್ಕರಿಸದ ಸೂಜಿ, ಸಿರಂಜ್ ಬಳಕೆಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಏಡ್ಸ್ ಹರಡುತ್ತದೆ. ಸೋಂಕಿತ ವ್ಯಕ್ತಿಯಲ್ಲಿ ದೀ ಕಾರ್ಲದವರೆಗೆ ಕೆಮ್ಮು, ಜ್ವರ, ಭೇದಿ, ತೂಕದಲ್ಲಿ ಶೇ.10ರಷ್ಟು ಇಳಿಕೆ, ಹಸಿವಾಗದಿರುವುದು, ನಿಶ್ಶಕ್ತಿ, ಚರ್ಮದ ಸೋಂಕು ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಉಚಿತವಾಗಿ ಪರೀಕ್ಷೆ ವಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಕುಮಾರ್ ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಮಾತನಾಡಿ, ಕೋವಿಡ್ -19ರ 3ನೇ ಅಲೆ ನಿಯಂತ್ರಿಸಬೇಕಾದರೆ 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು. ಇದರಿಂದ ರೂಪಾಂತರಿ ಒಮಿಕ್ರಾನ್ ನಿಯಂತ್ರಿಸಲು ಸಾಧ್ಯವಾಗುತ್ತದೆ. ಜತೆಗೆ ಕರೊನಾ ನಿಯಂತ್ರಿಸಬೇಕಾದರೆ ಮುಂಜಾಗ್ರತೆ ಪಾಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಂಯೋಜಕ ಚಂದ್ರಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಾಗಿ ತಂಬಾಕು ಉತ್ಪನ್ನಗಳ ಸೇವನೆ ಚಟಕ್ಕೆ ಬಲಿಯಾಗಿ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜಾಗೃತರಾಗ ಬೇಕೆಂದು ತಿಳಿಸಿದರು.

ಪ್ರಾಂಶುಪಾಲೆ ರೂಪ, ಎಬಿಆರ್‌ಕೆ ಜಿಲ್ಲಾ ಸಂಯೋಜಕಿ ಡಾ. ಸುಷ್ಮಾ, ಎನ್‌ಎಸ್‌ಎಸ್ ಸಂಯೋಜಕ ಶರತ್, ಜಿಲ್ಲಾ ಎಸ್‌ಬಿಸಿಸಿ ಸಂಯೋಜಕ ಸುರೇಶ್ ಬಾಬು, ರೆಡ್‌ಕ್ರಾಸ್ ಸಂಯೋಜಕ ರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಅರುಣೆಎ, ಆರೋಗ್ಯ ಸಿಬ್ಬಂದಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net