

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆಯ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಜಿಲ್ಲಾಡಳಿತ,ನೆಹರು ಯುವಕ ಕೇಂದ್ರ,ಅರಣ್ಯಇಲಾಖೆ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಸ್ಯಾಕ್ ಅಥ್ಲೆಟಿಕ್ ಸಂಸ್ಥೆ,ಸಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಶನಿವಾರ ಏಕತಾ ಓಟವನ್ನು ಆಯೋಜಿಸಲಾಗಿತ್ತು.
ಓಟಕ್ಕೆ ಹಸಿರು ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ,ದೇಶದ ಏಕತೆಗೆ ನಮ್ಮ ಹೋರಾಟ ನಿರಂತವಾಗಿರ ಬೇಕು. ಆ ಮೂಲಕ ದೇಶವನ್ನು ಅಭಿವೃದ್ಧಿ ಪಥದೆಡೆ ಮುನ್ನಡೆಸೋಣವೆಂದು ಆಶಿಸಿದರು. ಎಸ್ಪಿ ಜಿ.ರಾಧಿಕಾ ಮಾತನಾಡಿ, ಸ್ವಾತಂತ್ರೃ ಬಂದಂಥ ಸಂದರ್ಭದಲ್ಲಿ ಹರಿದು ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವಲ್ಲಿ ಪಟೇಲರ ಕೊಡುಗೆ ಅಪಾರವಾಗಿದೆ. ನಾವೆಲ್ಲರೂ ಒಂದೇ ಭಾವನೆಯೊಂದಿಗೆ ಎಂಥದ್ದೇ ಸಂದರ್ಭ ಬಂದರೂ ಅದನ್ನು ಎದುರಿಸೋಣ, ನಮ್ಮೆಲ್ಲರ ಸಂಘಟಿತ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏಕತಾ ಓಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಡಿಸಿ ಕಚೇರಿಯಿಂದ ಜೋಗಿಮಟ್ಟಿ ವನ್ಯಜೀವಿಧಾಮದ ಆಡುಮಲ್ಲೇಶ್ವರ ಕಿರು ಮೃಗಾಲಯದವರೆಗೆ ಏರ್ಪಡಿಸಿದ್ದ ಓಟದಲ್ಲಿ 50ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆ ಮಹೇಂದ್ರನಾಥ್,ಶಿವರಾಂ,ಗಾಯತ್ರಿ ಶಿವರಾಂ,ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ನಗರಠಾಣೆ ಪಿಐ ಟಿ.ಆರ್.ನಯೀಂ ಅಹಮದ್,ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎನ್.ಸುಹಾಸ್,ಚೇತನ್ ಬಾಬು, ಸಂತೋಷ್,ವಿಕ್ಕಿ,ಭರತ್,ಶಿವಾನಂದ,ಪುನೀತ್,ಜಯಕುಮಾರ್,ಶ್ರೀನಿವಾಸ್,ಮಹೇಶ್ ಮತ್ತಿತರರು ಇದ್ದರು.