

ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಸ್ಯಾಂಡಲ್‌ವುಡ್ ನಟ, ನಟಿಯರನ್ನು ಒಂದೇ ವೇದಿಕೆಯಲ್ಲಿ ಕಂಡು ಸಂಭ್ರಮಿಸುವಂತೆ ಮಾಡುವ ಸಲುವಾಗಿ ಕರ್ನಾಟಕ ಸೆಲೆಬ್ರಿಟಿ ಲೀಗ್ ಆಯೋಜಿಸಲಾಗಿದೆ. ಏ.28ರಿಂದ ಮೇ 3ರವರೆಗೆ ದುಬೈನ ಶಾರ್ಜಾ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ.
ಈ ಸಂಬಂಧ ನಗರದ ಲಲಿತ ಮಹಲ್ ಪ್ಯಾಲೇಸ್‌ನಲ್ಲಿ ತಂಡದ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಮಯೂರ್ ಮಾಸ್ಟರ್, ದುಬೈನಲ್ಲಿರುವ ಅನಿವಾಸಿ ಕನ್ನಡಿಗರು ಒಂದುಗೂಡಿ ಕರ್ನಾಟಕ ಸೆಲೆಬ್ರಿಟಿ ಲೀಗ್ ಆಯೋಜಿಸಿದ್ದಾರೆ. ಏ.28ರಿಂದ ಮೇ 3ರವರೆಗೆ ದುಬೈನ ಶಾರ್ಜಾ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮಾತ್ರ ಭಾಗವಹಿಸಲಿದ್ದಾರೆ. ಅವರಿಗಾಗಿಯೇ ಈ ಟೂರ್ನಿ ಆಯೋಜಿಸಲಾಗಿದೆ. ದುಬೈನಲ್ಲಿರುವ ಅನಿವಾಸಿ ಕನ್ನಡಿಗರನ್ನು ಒಂದುಗೂಡಿಸುವುದೇ ಇದರ ಉದ್ದೇಶ ಎಂದು ತಿಳಿಸಿದರು.
ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿವೆ. 12 ಓವರ್‌ಗಳ ಪಂದ್ಯ ಇದಾಗಿದ್ದು, ಎರಡು ಗುಂಪಿನಲ್ಲಿ ತಲಾ 5 ತಂಡಗಳಿದ್ದು, ಪ್ರತಿ ತಂಡ 4 ಪಂದ್ಯಗಳನ್ನಾಡಲಿದೆ. ಪ್ರತಿ ಗುಂಪಿನ ಟಾಪ್ ಎರಡು ತಂಡಗಳು ನಾಕ್‌ಔಟ್ ಪಂದ್ಯ ಆಡಲಿವೆ. ಪಂದ್ಯದ ನೇರ ಪ್ರಸಾರವೂ ಇರಲಿದೆ. ಲೂಸ್ ಮಾದ ಯೋಗಿ, ಡಾರ್ಲಿಂಗ್ ಕೃಷ್ಣ, ತರುಣ್ ಸುಧೀರ್ ಸೇರಿದಂತೆ ಹಲವರು ತಂಡದ ನಾಯಕರಾಗಲಿದ್ದಾರೆ. ಇಂದು ತಂಡದ ಆಟಗಾರರ ಹರಾಜು ಪ್ರಕ್ರಿಯೆಯನ್ನು ಮೈಸೂರಿನಲ್ಲೇ ನಡೆಸಲಾಗುತ್ತಿದೆ ಎಂದರು.
ಅನಿವಾಸಿ ಕನ್ನಡಿಗ ಸಿರಾಜ್ ಮಾತನಾಡಿ, ಕೋವಿಡ್‌ಗೂ ಮುನ್ನ ದುಬೈನಲ್ಲಿ ನಮ್ಮ ಅನಿವಾಸಿ ಕನ್ನಡಿಗರ ಸಂಘ ಹುಟ್ಟಿಕೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಕನ್ನಡಿಗರನ್ನು ಒಂದೆಡೆ ಸೇರಿಸುವ ಉದ್ದೇಶ ನಮ್ಮದಾಗಿತ್ತು. ಕೋವಿಡ್ ಸಮಯದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ವಿಮಾನ ಸೇವೆ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ನಮ್ಮ ಸಂಘ ನೆರವಿಗೆ ನಿಂತಿದೆ. ಜತೆಗೆ ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಿದೆ. ಆದರೆ, ಒಂದು ದೊಡ್ಡ ಕಾರ್ಯಕ್ರಮ ಮಾಡಿ ಎಲ್ಲರನ್ನೂ ಒಂದೆಡೆ ಸೇರಿಸಲು ಸಾಧ್ಯವಾಗಿರಲಿಲ್ಲ. ಇಂದು ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿರುವುದರಿಂದ ಕನ್ನಡದ ಸೆಲೆಬ್ರಿಟಿಗಳನ್ನು ದುಬೈಗೆ ಕರೆಸಲು ಈ ಟೂರ್ನಿ ಮಾಡುತ್ತಿದ್ದೇವೆ. ಇದರಿಂದ ಎಲ್ಲ ಕಲಾವಿದರನ್ನೂ ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ದುಬೈನಲ್ಲಿನ ಕನ್ನಡಿಗರಿಗೆ ಸಿಗಲಿದೆ ಎಂದರು.
ದುಬೈನಲ್ಲಿ ಸುಮಾರು 10 ಸಾವಿರ ಕನ್ನಡಿಗರಿದ್ದಾರೆ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸಬೇಕು. ಈ ಕ್ರಿಕೆಟ್ ಲೀಗ್ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದರು.
ಅನಿವಾಸಿ ಕನ್ನಡಿಗ ಶ್ರೀನಿಧಿ ಇತರರು ಇದ್ದರು.