ಏ.12 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು

Music _1
Published on

ಸಂಗೀತ ರಸಿಕರ ಮೆಚ್ಚುಗೆ ಗಳಿಸಿರುವ ವಿದುಷಿ ಧನ್ಯಾ ದಿನೇಶ್ ರುದ್ರಪಟ್ಟಣ ಅವರು ಏ.12 ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ.

ಅಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ-278 ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಗೀತ ಕಾರ್ಯಕ್ರಮ ನೀಡವ ಇವರಿಗೆ ವಿದುಷಿ ಸಿ.ವಿ. ಶ್ರುತಿ(ವಯೊಲಿನ್), ವಿದ್ವಾನ್ ಎ. ರಾಧೇಶ್(ಮೃದಂಗ) ಹಾಗೂ ವಿದ್ವಾನ್ ಎಸ್. ಮಂಜುನಾಥ್(ಘಟಂ) ಸಹಕಾರ ನೀಡಲಿದ್ದಾರೆ.

ವಿದುಷಿ ಧನ್ಯಾ ದಿನೇಶ್ ರುದ್ರಪಟ್ಟಣ ಅವರು ಉದಯೋನ್ಮುಖ ಕರ್ನಾಟಕ ಸಂಗೀತಗಾರರು. ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದ ಆಕರ್ಷಣೆ ಹೊಂದಿದ್ದವರು ಕೆಲವು ಕಾಲ ಚೆನ್ನೈನ ವಿದ್ವಾನ್ ನೈವೇಲಿ ಆರ್.ಸಂತಾನ ಗೋಪಾಲನ್‌ರವರ ಶಿಷ್ಯರಾಗಿದ್ದರು. ಅನಂತರ ವಿದ್ವಾನ್ ಡೆಲ್ಲಿ ಪಿ. ಸುಂದರರಾಜನ್‌ರವರ ಬಳಿ ಸಂಗೀತ ಕಲಿಕೆಯನ್ನು ಮುಂದುವರಿಸಿದರು. ಬೆಂಗಳೂರಿನ ಗಾಯನ ಸಮಾಜ ಮತ್ತು ಮೈಸೂರಿನ ಜೆಎಸ್‌ಎಸ್ ಸಂಗೀತಸಭೆಯ ವಾರ್ಷಿಕ ಸಮ್ಮೇಳನಗಳಲ್ಲಿ ಕಾರ್ಯಕ್ರಮ ನೀಡಿರುವರು. ಉದಯೋನ್ಮುಖ ಸಂಗೀತಗಾರರಿರಾಗಿ ನಡೆದ ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಯ ಬಹುಮಾನಿತರಾಗಿದ್ದಾರೆ. ಮೈಸೂರಿನ ನಾದಬ್ರಹ್ಮ ಸಂಗೀತ ಸಭೆಯ ನಾದಕಿಶೋರಿ ಪ್ರಶಸ್ತಿಗೆ ಭಾಜನರು. ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಅಸಂಖ್ಯಾತ ಕಾರ್ಯಕ್ರಮಗಳನ್ನು ನೀಡಿರುವ ಖ್ಯಾತಿ. ಅಖಿಲ ಭಾರತ ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದರು. ತ್ರಿಸ್ಥಾಯಿಯಲ್ಲಿಯೂ ಸರಾಗವಾಗಿ ನುಡಿಯುವಂಥ ಶಾರೀರ, ಶಾಸ್ತ್ರಶುದ್ಧಿ, ಸಾಹಿತ್ಯನಿಷ್ಠೆ ಮುಂತಾದ ಗುಣಗಳಿಂದ ಕೂಡಿದ ಸುಮಧುರ ಗಾಯನದಿಂದ ಶ್ರೋತೃಗಳು ಮತ್ತು ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net