ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ/ಬೋಧನಾ ವಿಧಾನ ಬದಲಿಸಿಕೊಳ್ಳಿ-ವಿಶೇಷ ತರಗತಿ ಕಡ್ಡಾಯ /ಅಕ್ರಂಪಾಷಾ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಬೋಧನಾ ವಿಧಾನ ಬದಲಿಸಿಕೊಳ್ಳಿ, ಶಾಲಾ ಹಂತದಲ್ಲೇ ಕ್ರಿಯಾಯೋಜನೆ ಮಾಡಿಕೊಳ್ಳಿ, ವಿಶೇಷ ತರಗತಿಗಳನ್ನು ನಡೆಸಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರ ಹೊರವಲಯದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಾಲಿಗಿಂತ ಫಲಿತಾಂಶ ಕುಸಿತವಾಗಲು ಕಾರಣ ಹುಡುಕಿ, ಅದನ್ನು ಸರಿಪಡಿಸಿಕೊಳ್ಳಲು ಮಾಡಬೇಕಾದ ಕೆಲಸಗಳ ಕುರಿತು ಕ್ರಿಯಾಯೋಜನೆಯನ್ನು ಶಾಲಾ ಹಂತದಲ್ಲೇ ತಯಾರಿಸಿಕೊಳ್ಳಿ ಎಂದು ಸೂಚಿಸಿದರು. ಅಧಿಕಾರಿಗಳು ಮಿಂಚಿನ ಸಂಚಾರ ನಡೆಸಿ ಶಾಲೆಗಳಲ್ಲಿ ಆಗಿರುವ ಬದಲಾವಣೆಗಳ ಕುರಿತು ದೃಢಪಡಿಸಿಕೊಳ್ಳಿ ಎಂದು ತಿಳಿಸಿದರು.

ಜಿಲ್ಲೆಯ ಫಲಿತಾಂಶ ಉತ್ತಮಪಡಿಸುವ ಕಾರ್ಯದಲ್ಲಿ ಶಿಕ್ಷಕರಲ್ಲಿ ಬದ್ದತೆ ಮೂಡಬೇಕು. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತಿಸಿ, ಅದರಂತೆ ನಿಮ್ಮ ಬೋಧನಾ ವಿಧಾನದಲ್ಲಿ ಬದಲಾವಣೆ ತಂದುಕೊಳ್ಳಿ, ಮುಖ್ಯಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲೆಗಳ ಇ-ಖಾತೆ ದಾಖಲೆಗಳನ್ನು ವಿತರಿಸಿ, ಶಾಲೆಗೆ ಸಂಬAಧಿಸಿದ ಆಸ್ತಿ ಶಾಲೆಯದ್ದೇ ಅಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಿ, ಇ-ಖಾತೆ ಮಾಡಿಸಿ ಇಲ್ಲವಾದಲ್ಲಿ ನಂತರ ವಿನಾಕಾರಣ ವಿವಾದಗಳಿಗೆ ಅವಕಾಶ ನೀಡದಿರಿ ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯ ಶಾಲೆಗಳ ಇ-ಖಾತೆ ಮಾಡಿಕೊಡಲು ಪಿಡಿಒಗಳಿಗೆ ಸೂಚಿಸಲಾಗಿದೆ, ಅದರಂತೆ ಕ್ರಮವಹಿಸಲಾಗಿದೆ. ಉಳಿದ ಶಾಲೆಗಳ ಮುಖ್ಯಶಿಕ್ಷಕರು ಜವಾಬ್ದಾರಿ ವಹಿಸಿ ಇ-ಖಾತೆ ಮಾಡಿಸಿ ಅದರ ಪ್ರತಿಯನ್ನು ಶಾಲೆಯ ಗೋಡೆಗೆ ನೇತು ಹಾಕಿ ಎಂದು ಸೂಚಿಸಿದರು.

ಪ್ರಸ್ತುತ ಸಾಲಿನಲ್ಲಿ ಕಳಪೆ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು, ಅಂತಹ ಶಾಲೆಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಡಿಡಿಪಿಐ ಅವರಿಗೆ ಸೂಚಿಸಿದರು.

೧೧೨ ಸಹಾಯವಾಣಿ ಬಳಸುವುದನ್ನು ಕಲಿಸಿ :
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಜಿಲ್ಲಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳ ಜಾಗಕ್ಕೆ ಇ-ಸ್ವತ್ತು ಮಾಡಿಸಿಕೊಡಲು ಕ್ರಮವಹಿಸಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ ಎಂದರು.

ದೌರ್ಜನ್ಯ, ಲೈಂಕಿಕ ಕಿರುಕುಳ ಮತ್ತಿತರ ಸಮಸ್ಯೆಗಳು ಎದುರಾದಾಗ ೧೧೨ ಸಹಾಯವಾಣಿ ಬಳಸುವ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಈ ಸಂಖ್ಯೆಯನ್ನು ಶಾಲೆಯಲ್ಲಿ ಹಲವು ಕಡೆ ಬರೆಸಿ, ಜತೆಗೆ ಬಾಲಕಾರ್ಮಿಕತೆ, ಬಾಲ್ಯವಿವಾಹ ಮತ್ತಿತರ ಪಿಡುಗುಗಳ ನಿವಾರಣೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ನೈತಿಕ ಮೌಲ್ಯ ಬೆಳೆಸುವ ಮೂಲಕ ಅವರಲ್ಲಿ ಅಪರಾಧ ಮುಕ್ತ ಭಾವನೆ ಗಟ್ಟಿಗೊಳಿಸಬೇಕೆಂದು ತಿಳಿಸಿದರು.

ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಮಕ್ಕಳ ಕಲಿಕೆಗೆ ಸಹಕಾರಿಯಾಗಲು ಸಂಪನ್ಮೂಲ ಪುಸ್ತಕಗಳು, ಮಾದರಿ ಪ್ರಶ್ನೆಪತ್ರಿಕೆಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಡಯಟ್ ಪ್ರಾಂಶುಪಾಲರಾದ ಕೆ.ಎನ್.ಜಯಣ್ಣ ಮತ್ತು ಡಯಟ್ ಹಿರಿಯ ಉಪನ್ಯಾಸಕ ರಾಘವೇಂದ್ರ ಮಾತನಾಡಿ, ಎಸ್.ಎಸ್.ಎಲ್.ಸಿ. ಫಲಿತಾಂಶ ಉತ್ತಮಪಡಿಸುವ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುA, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿಲಕ್ಷö್ಮಯ್ಯ, ಮುನಿವೆಂಕಟರಾಮಾಚಾರಿ, ಚಂದ್ರಕಲಾ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಮುಖ್ಯಶಿಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ತಾಹೇರಾ ನುಸ್ರತ್, ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.

ಚಿತ್ರ ೦೯ ಕೆ.ಎಲ್.ಆರ್. ೦೪ : ಕೋಲಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರ ಹೊರವಲಯದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ನಡೆದ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಶಾಲೆಗಳ ಇ-ಸ್ವತ್ತು ದಾಖಲೆಗಳನ್ನು ಮುಖ್ಯಶಿಕ್ಷಕರಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net