ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗಳು ಮುಂದೂಡಿಕೆ!

ADMISSION_STUDENTS_UNIVERSITY
Published on


ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರೊನಾದಿಂದ ಶೈಕ್ಷಣಿಕ ವರ್ಷ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳು ನಡೆಯುವುದು ಕಷ್ಟ.
ಪ್ರತಿ ವರ್ಷ ಏಪ್ರಿಲ್ ಅಥವಾ ಮಾರ್ಚ್ ಅವಧಿಯಲ್ಲಿ ಎರಡು ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ, ಈ ಆಕ್ಟೋಬರ್ ಬಂದರೂ ಶಾಲಾ-ಕಾಲೇಜು ಆರಂಭವಾಗದೇ ಇರುವುದರಿಂದ ಪರೀಕ್ಷೆಗಳು ಸಹ ಈ ವರ್ಷ ಮುಂದೂಡುವ ಸಾಧ್ಯತೆ ಇದೆ.
ಪರೀಕ್ಷೆ ಆರು ತಿಂಗಳು ಇರುವಾಗಲೇ ಸಿದ್ಧತೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ಶಾಲಾ-ಕಾಲೇಜು ಆರಂಭವಾಗಲಿ ಎಂದು ಪರೀಕ್ಷಾ ಮಂಡಳಿಗಳು ಕಾಯುತ್ತಿರುವುದರಿಂದ ಈ ವರ್ಷ ಪರೀಕ್ಷೆ ಸಿದ್ಧತೆಗಳು ನಡೆಯುತ್ತಿಲ್ಲ. ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶೇ.30 ಪಠ್ಯಕ್ರಮವನ್ನು ಕಡಿತ ಮಾಡಿ ಸರ್ಕಾರದ ಅನುಮತಿಗಾಗಿ ಕಳುಹಿಸಿದೆ. ಆದರೆ, ಈವರೆಗೂ ಅನುಮತಿ ಸಿಕ್ಕಿಲ್ಲ. ಈ ರೀತಿ ವಿಳಂಬವಾಗುತ್ತಿರುವುದರಿಂದ ಪರೀಕ್ಷೆಗಳನ್ನು ನಿಗದಿತ ಅವಧಿಗಿಂತ ಮುಂದೂಡುವುದು ಅನಿವಾರ್ಯವಾಗಲಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಈ ವರ್ಷ ಕರೊನಾದಿಂದಲೇ ಮಾರ್ಚ್‌ನಲ್ಲಿ ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದ್ದು ಮಾತ್ರ ಜೂನ್ ಕೊನೆಯ ವಾರದಲ್ಲಿ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಪರೀಕ್ಷೆಗಳು ಸಹ ಜೂನ್-ಜುಲೈ ಅವಧಿಯಲ್ಲೇ ನಡೆಸಬೇಕಾಗುತ್ತದೆ. ಈ ಕುರಿತು ಮುಂದಿನ ತಿಂಗಳಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net