ಎಸ್ಸೆಲ್ಸಿ ಮತ್ತು ಪಿ.ಯು.ಸಿ ಕಳಪೆ ಸಾಧನೆ / ಡಿಡಿಪಿಐ, ಡಿಡಿಪಿಯು ಗೆ ತರಾಟೆ / ಶಾಲಾ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ಜಾರಿಗೆ ಸಿಇಒ ಸೂಚನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳೆದ ವರ್ಷದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.೬೮.೩೭ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೭೦.೪ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿರುವ ಕುರಿತು ಡಿಡಿಪಿಐ ಕೃಷ್ಣಮೂರ್ತಿ ಮತ್ತು ಡಿಡಿಪಿಯು ಬಾಲಕೃಷ್ಣರವರನ್ನು ಕೋಲಾರ ಜಿಲ್ಲಾ ಪಂಚಾಯತ್ ಸಿಇಒ ಪ್ರವೀಣ್ ಪಿ.ಬಾಗೇವಾಡಿ ತರಾಟೆಗೆ ತೆಗೆದುಕೊಂಡರು.

ಕಳೆದ ತಿಂಗಳ ಅಂತ್ಯಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಡೆಸಿದ ಡಿಸಿ ಮತ್ತು ಸಿಇಒ ಗಳ ಸಭೆಯಲ್ಲಿ ಫಲಿತಾಂಶ ಕುಸಿದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸಿಇಒ ನೇತೃತ್ವದಲ್ಲಿ ನಡೆಸಿದ ಶಿಕ್ಷಣ ಇಲಾಖೆಯ ಪ್ರಗತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕೋಪತಾಪ ಪ್ರದರ್ಶಿಸಿದರು.

ಕಡಿಮೆ ಫಲಿತಾಂಶ ಬಂದಿರುವ ಕೆಜಿಎಫ್ ಮತ್ತು ಬಂಗಾರಪೇಟೆ ಬಿಇಒಗಳಿಗೆ ಶೋಕಾಸ್ ನೋಟಿಸ್ ನೀಡಲು ಸೂಚನೆ:

ಎಲ್ಲ ಸೌಲಭ್ಯಗಳಿದ್ದರೂ ಜಿಲ್ಲೆಯ ಹಲವು ಶಾಲೆಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ತರಲು ವಿಫಲವಾಗಿವೆ. ಕೆಲವು ಶಾಲೆಗಳಲ್ಲಿ ಒಂದೇ ಒಂದು ಮಗುವನ್ನು ಪಾಸ್ ಮಾಡಿಸುವಷ್ಟು ಸಹ ಕಲಿಸದ ಶಿಕ್ಷಕರಿಗೆ ಮತ್ತು ಮುಖ್ಯಸ್ಥರಿಗೆ ನಾಚಿಕೆ ಆಗಬೇಕು. ನಿಮ್ಮ ಶಿಕ್ಷಕ ವೃತ್ತಿ ನಿಮಗೆ ಆತ್ಮತೃಪ್ತಿ ನೀಡಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿಇಒ ಎಚ್ಚರಿಸಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ೫೩ ಮಕ್ಕಳಿದ್ದು ಅವರನ್ನು ಮತ್ತೆ ಶಾಲೆಗೆ ಸೇರಿಸುವಂತೆ ವಿದ್ಯಾರ್ಥಿ ಮತ್ತು ಪೋಷಕರಿಗೆ ಅರಿವು ಕಾರ್ಯಕ್ರಮ ಮಾಡಲು ಸೂಚಿಸಿದರು.

ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಲಾಖೆ ಜತೆ ಮಾತನಾಡಿ, ಈಗಾಗಲೇ ನಡೆಯುತ್ತಿರುವ ಶಾಲಾ ಕಾಲೇಜು ಕಟ್ಟಡ ನಿರ್ಮಾಣ ಮತ್ತು ರಿಪೇರಿ ಕಾಮಗಾರಿ ಶೀಘ್ರದಲ್ಲಿ ಮುಗಿಸಿ ವರದಿಯನ್ನು ನೀಡುವಂತೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದವರ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಏಕೆ ಕಡಿಮೆಯಾಗಿದೆ. ಅದನ್ನು ತಿಳಿದು ವಾರ್ಡನ್ ಗಳಿಗೆ ನೋಟಿಸ್ ವಿತರಿಸಿ. ಮುಂದಿನ ವರ್ಷದ ಪರೀಕ್ಷೆಗೆ ಈಗಿನಿಂದಲೇ ವಿಶೇಷ ತರಗತಿಗಳನ್ನು ಮಾಡಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಮೈಲಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೀತಮ್ಮಗೆ ಸೂಚನೆ ನೀಡಿದರು.

ಆಶಿಸ್ತಿನ ಶಿಕ್ಷಕರ ವಿರುದ್ಧ ಕ್ರಮ:

ಶಾಲೆಗಳಿಗೆ ಅನಧಿಕೃತವಾಗಿ ಗೈರಾಗುವ, ನಿಗಧಿತ ಸಮಯಕ್ಕೆ ಶಾಲೆಗೆ ಹೋಗದ ಮತ್ತು ಕಲಿಕೆಯಲ್ಲಿ ಪ್ರಗತಿ ಸಾಧಿಸದ ಶಿಕ್ಷಕರನ್ನು ಗುರುತಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಇಒ ಅಧಿಕಾರಿಗಳಿಗೆ ಸೂಚಿಸಿದರು.

ಶೈಕ್ಷಣಿಕ ಸುಧಾರಣೆಗಾಗಿ ಮಿಷನ್ ಮೋಡ್ ದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕೆಲಸ ಮಾಡಿದರೂ ಸರಿಯಾದ ಸಾಧನೆ ಮಾಡಲಿಲ್ಲ. ಕಳಪೆ ಗುಣಮಟ್ಟದ ಸಾಧನೆಗೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಹೊಣೆ ಹೊರಬೇಕು ಎಂದು ಹೇಳಿದರು.

ಕೈತುಂಬ ಸಂಬಳ, ಸೌಲಭ್ಯ ನೀಡಿದ್ದರೂ ತಪ್ಪು ಒಪ್ಪಿಕೊಳ್ಳದೇ ಸಣ್ಣ ಪುಟ್ಟ ಕಾರಣ ನೀಡಿ, ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವದರಿಂದ ಯಾವ ಪ್ರಯೋಜನವಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಛೀಮಾರಿ ಹಾಕಿದರು.

ಪ್ರತಿ ಶಿಕ್ಷಕನ ಕರ್ತವ್ಯಗಳ ಮೌಲ್ಯಮಾಪನ ಮಾಡುವ ಮತ್ತು ಗ್ರೇಡಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಇದೆ. ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ಹಾಗೂ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡುವ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೇ, ನಿಷ್ಕಾಳಜಿ, ಕರ್ತವ್ಯಲೋಪ ಮಾಡುವ ಅಧಿಕಾರಿ ಮತ್ತು ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಏಕೆ ಕುಂಠಿತಗೊAಡಿರುವ ಮತ್ತು ಮುಂದಿನ ವರ್ಷದ ಕ್ರಿಯಾ ಯೋಜನೆಯನ್ನು ತಯಾರು ಮಾಡಿಕೊಂಡು ಫಲಿತಾಂಶ ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸತತವಾಗಿ ಕಡಿಮೆ ಫಲಿತಾಂಶ ಮಾಡುತ್ತಿರುವ ಶಾಲೆಗಳಿಗೆ ಅಧಿಕಾರಿಗಳಿಂದ ಅನಿರೀಕ್ಷಿತ ಭೇಟಿ, ಪರಿಶೀಲನೆಗೆ ಆದೇಶಿಸಿ, ವರದಿ ಪಡೆಯಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಣ ಸಂಯೋಜಕರು ಉಪಸ್ಥಿತರಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೧ : ಜಿಲ್ಲಾ ಪಂಚಾಯತ್ ಸಿಇಒ ಪ್ರವೀಣ್ ಪಿ.ಬಾಗೇವಾಡಿ ರವರ ಭಾವಚಿತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net