

ನಂಜನಗೂಡು: ನಂಜನಗೂಡಿನ ಕಬಿನಿ ನೀರಾವರಿ ಇಲಾಖೆ ಅಧಿಕಾರಿಗಳು 3ಕ್ಕೂ ಹೆಚ್ಚಿನ ಕಾಮಗಾರಿಯನ್ನು ಒಟ್ಟಿಗೆ ಸೇರಿಸಿ 3 ಕೋಟಿ ರೂ.ಗಿಂತ ಹೆಚ್ಚಿನ ಪ್ಯಾಕೇಜ್ ಟೆಂಡರ್ ಕರೆಯುವ ಮೂಲಕ ಎಸ್ಸಿ, ಎಸ್ಟಿ ವರ್ಗದ ಗುತ್ತಿಗೆದಾರರನ್ನು ಕಾಮಗಾರಿಗಳಿಂದ ದೂರವಿಟ್ಟು ವಂಚಿಸುತ್ತಿದ್ದಾರೆ. ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಆಗ್ರಹಿಸಿ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಯಿತು.
ನಗರದ ಕಬಿನಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಉಪ್ಪಿನಹಳ್ಳಿ ಶಿವಣ್ಣ ಮಾತನಾಡಿ, ಎಸ್ಸಿ, ಎಸ್ಟಿ ವರ್ಗದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಾಮಗಾರಿಗಳಲ್ಲಿ ಮೀಸಲಾತಿ ಜಾರಿಗೆ ತಂದರು. ಪ್ರಸ್ತುತ 50 ಲಕ್ಷವರೆಗಿನ ಕಾಮಗಾರಿಗಳಿಗೆ ಎಸ್ಸಿ, ಎಸ್ಟಿ ವರ್ಗದ ಗುತ್ತಿಗೆದಾರರು ಮೀಸಲು ವ್ಯವಸ್ಥೆಯ ಅನುಕೂಲ ಪಡೆಯುವ ಅವಕಾಶವಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಎಸ್ಸಿ, ಎಎಸ್ಟಿ ವರ್ಗದ ಗುತ್ತಿಗೆದಾರರನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಟ್ಟು ಕೆಲಸ ನೀಡದೆ ವಂಚಿಸುವ ಹುನ್ನಾರದಿಂದ ಸುಮಾರು 3 ರಿಂದ 4 ಕಾಮಗಾರಿಗಳನ್ನು ಒಟ್ಟಿಗೆ ಸೇರಿಸಿ 3.35 ಕೋಟಿ, 4.23 ಕೋಟಿ, 82.35 ಲಕ್ಷ ರೂ.ಗಳಿಗೆ 3 ವಿವಿಧ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. ಆದ್ದರಿಂದ ಶಾಸಕರು, ಅಧಿಕಾರಿಗಳು ಈ ಬೃಹತ್ ಮೊತ್ತದ ಟೆಂಡರ್‌ಗಳನ್ನು ರದ್ದುಪಡಿಸಿ 50 ಲಕ್ಷ ರೂ.ಗಳಿಗೆ ನಿಗದಿಪಡಿಸಿ ಟೆಂಡರ್ ಕರೆಯುವ ಮೂಲಕ ಬಡ ವರ್ಗದ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪ್ರತಿಭಟನೆ ರೂಪಿಸುವುದಾಗಿ ಎಚ್ಚರಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, 50 ಲಕ್ಷ ರೂ.ಗಳಿಗೆ ಸೀಮಿತವಾಗಿರುವ ಮೀಸಲು ವ್ಯವಸ್ಥೆಯ ಕಾಮಗಾರಿಗಳನ್ನು 1 ಕೋಟಿ ರೂ.ಗೆ ಹೆಚ್ಚಿಸಿ ಅನುಕೂಲ ಮಾಡಬೇಕೆಂದು ಗುತ್ತಿಗೆದಾರರ ಸಂಘ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಕೆಲವೆಡೆ ಬೃಹತ್ ಮೊತ್ತದ ಟೆಂಡರ್‌ಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೋರೆ ಹೋಗಿದ್ದೇವೆ. ನ್ಯಾಯಾಲಯ ಕಾಮಗಾರಿಗಳಿಗೆ ತಡೆಯಾಜ್ಞೆ ನೀಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಬೃಹತ್ ಮೊತ್ತದ ಕಾಮಗಾರಿ ರದ್ದುಪಡಿಸಬೇಕೆಂದು ಆಗ್ರಹಿಸಿದರು. ನಂತರ ಕಬಿನಿ ಕಾರ್ಯಪಾಲಕ ಇಂಜಿನಿಯರ್ ಬಿ.ಎಂ.ರಾಜು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ಶ್ರೀಕಂಠ, ಬಸವರಾಜು, ರಾಜೇಶ್, ಶಂಕರನಾಯಕ, ಕಾಳಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ಶ್ರೀಕಂಠನಾಯಕ, ಮುಖಂಡರಾದ ಹುಂಡಿ ನಾಗರಾಜು, ಸೌಭಾಗ್ಯ, ಸಿದ್ದರಾಜು, ಆರ್.ಮಹದೇವ, ಶ್ರೀನಿವಾಸ್, ರಾಜೇಶ್, ಲೋಕೇಶ್, ಪದಾಧಿಕಾರಿಗಳು ಇದ್ದರು.