

ಪಿರಿಯಾಪಟ್ಟಣ: ಹೆಚ್ಚುವರಿ ಸಾಲ ನೀಡದ ಬ್ಯಾಂಕ್‌ನ ನೀತಿ ವಿರೋಧಿಸಿ ಬುಧವಾರ ಪಿರಿಯಾಪಟ್ಟಣ ಎಸ್‌ಬಿಐ ಎಡಿಬಿ ಅಬ್ಬೂರು ಶಾಖೆಯ ಬಾಗಿಲು ಮುಚ್ಚಿಸಿ ರೈತರು ಪ್ರತಿಭಟನೆ ನಡೆಸಿದರು.
ವ್ಯವಸಾಯಕ್ಕಾಗಿ ಸಾಲ ನೀಡಲು ಸ್ಥಾಪಿತವಾಗಿರುವ ಬ್ಯಾಂಕ್ ಆಗಿದ್ದರೂ ತಂಬಾಕು ಬೆಳೆಗಾರರಿಗೆ ಹೆಚ್ಚುವರಿ ಸಾಲ ನೀಡದೆ ಸತಾಯಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ರೈತ ಮುಖಂಡ ಹಿಟ್ನಹಳ್ಳಿ ಪರಮೇಶ್ ಮಾತನಾಡಿ, ಈ ಹಿಂದೆ ತಂಬಾಕು ಬೆಳೆಯ ನಂತರ ಬೆಳೆಗಾರರಿಗೆ ತಂಬಾಕು ಹದಮಾಡಲು ಸೌದೆಸಾಲ ನೀಡಲಾಗುತ್ತಿತ್ತು, ಮೂವರು ಫೀಲ್ಡ್ ಆಫೀಸರ್‌ಗಳಿದ್ದರು. ಈಗ ಮೂವರನ್ನು ವರ್ಗಾವಣೆ ಮಾಡಿದ್ದು ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸಲು ಫೀಲ್ಡ್ ಆಫೀಸರ್‌ಗಳೇ ಇಲ್ಲ. ವ್ಯವಸಾಯ ಸಾಲದ ಮಂಜೂರಾತಿ ನೀಡುವ ಅಧಿಕಾರವನ್ನು ಮ್ಯಾನೇಜರ್‌ಗಳಿಂದ ಹಿಂಪಡೆದಿದ್ದು ಪ್ರತಿಯೊಂದಕ್ಕೂ ಹುಣಸೂರು ಶಾಖೆಯಲ್ಲಿ ಅನುಮತಿ ಪಡೆಯುವಂತಾಗಿದೆ. ಇದರಿಂದಾಗಿ ಎರಡು ತಿಂಗಳಾದರೂ ಯಾವುದೇ ಮಂಜೂರಾತಿ ದೊರಕುತ್ತಿಲ್ಲ ಎಂದು ಆರೋಪಿಸಿದರು.
ಹಿಂದೆ ಪಡೆದಿರುವ ಸಾಲ ತಿರುವಳಿ ಮಾಡಿ ಹೊಸದಾಗಿ ಬೆಳೆಸಾಲ ಕೇಳಲು ಹೋದರೆ ಬ್ಯಾಂಕ್ ರೈತರಿಗೆ ಸಾಲ ನೀಡದೆ ವಂಚಿಸುತ್ತಿದೆ ಎಂದು ದೂರಿದರು. 30 ವರ್ಷಗಳಿಂದ ಬ್ಯಾಂಕ್‌ನಲ್ಲಿ ವಹಿವಾಟು ಮಾಡುತ್ತಿರುವ ರೈತರಿಗೆ ದೀರ್ಘಾವಧಿ ಸಾಲಗಳನ್ನು ವಿತರಣೆ ಮಾಡಲು ಮುಂದಾಗುತ್ತಿಲ್ಲ, ಬ್ಯಾಂಕ್‌ನಲ್ಲಿ ರೈತರಿಗೆ ಸೂಕ್ತ ಸೌಲಭ್ಯ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಮಧ್ಯಸ್ಥಿಕೆ: ಪ್ರತಿಭಟನಾನಿರತರೊಂದಿಗೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಮ್ಯಾನೇಜರ್ ಮತ್ತು ಆರ್‌ಎಂಒ ಹಾಗೂ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿ 3 ದಿನ ಕಾಲಾವಕಾಶ ನೀಡುವಂತೆ ಬ್ಯಾಂಕ್ ಸಿಬ್ಬಂದಿ ಮನವಿ ಮಾಡಿದರು. ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆ ಹಿಂಪಡೆದರು.
ಮುಖಂಡರಾದ ಪಟೇಲ್ ಶ್ರೀನಿವಾಸ್, ತೆಲಗಿನಕುಪ್ಪೆ ನಾಗಣ್ಣ, ಚಲುವಯ್ಯ, ಚಂದ್ರು, ಶಿವಲಿಂಗೇಗೌಡ ಇತರರು ಹಾಜರಿದ್ದರು.