

ಬೆಂಗಳೂರಿನಲ್ಲಿ ನಿಧನರಾದ ಎಸ್.ಎಲ್.ಭೈರಪ್ಪ ಅವರ ಪಾರ್ಥಿವ ಶರೀರವನ್ನು ಗುರುವಾರ ಮೈಸೂರಿಗೆ ತಂದು ಕಲಾಮಂದಿರದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಸಂಜೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಶುಕ್ರವಾರ ಬೆಳಗ್ಗೆ 9.12ಕ್ಕೆ ಜೆಎಸ್‌ಎಸ್ ಆಸ್ಪತ್ರೆಯಿಂದ ಭೈರಪ್ಪ ಪಾರ್ಥಿವ ಶರೀರವನ್ನು ರಾಷ್ಟ್ರೋಸ್ಥಾನ ಆಸ್ಪತ್ರೆಯ ಆಂಬುಲೆನ್ಸ್ ಮೂಲಕ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸರತಿ ಸಾಲಿನಲ್ಲಿ ಹೋಗಲು ಹಾಗೂ ಅಭಿಮಾನಿಗಳ ನೂಕುನುಗ್ಗಲು ತಪ್ಪಿಸಲು ಬ್ಯಾರಿಕೇಡ್ ಅಳವಡಿಸಿದ್ದರು.
ನೆಚ್ಚಿನ ಸಾಹಿತಿಯ ಅಂತಿಮ ದರ್ಶನ ಪಡೆಯಲು ಮೈಸೂರು, ಹಾಸನ ಸೇರಿ ಹಲವು ಜಿಲ್ಲೆಯಿಂದ ಅಪಾರ ಅಭಿಮಾನಿಗಳು ಆಗಮಿಸಿದ್ದರು. ಎಲ್ಲರಿಗೂ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭೈರಪ್ಪ ಅವರ ಪತ್ನಿ ಸರಸ್ವತಿ, ಮಕ್ಕಳಾದ ರವಿಶಂಕರ್, ಉದಯಶಂಕರ್, ಹಿರಿಯ ಪರ್ತಕರ್ತ ವಿಶ್ವೇಶ್ವರ ಭಟ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ವೈದ್ಯ ಡಾ.ಲಕ್ಷ್ಮೀ ನಾರಾಯಣ, ಚಿಂತಕ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮೇಯರ್ ಶಿವಕುಮಾರ್, ಮಾಜಿ ಶಾಸಕ ಎಲ್.ನಾಗೇಂದ್ರ, ಸಾಹಿತಿ ಪ್ರಧಾನ ಗುರುದತ್ತ, ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್, ಪ್ರಮುಖರಾದ ಬಸವರಾಜ್, ಜೈನಹಳ್ಳಿ ಸತ್ಯನಾರಾಯಣ ಗೌಡ, ರವೀಂದ್ರಸ್ವಾಮಿ, ಕೆ.ವಿ.ಮಲ್ಲೇಶ್, ಜೆ.ಎಸ್.ಜಗದೀಶ್, ಎಚ್.ವಿ.ರಾಜೀವ್, ವಿಕ್ರಂ ಮುತ್ತಣ್ಣ, ಆರ್‌ಎಸ್‌ಎಸ್‌ನ ಪ್ರಮುಖರಾದ ವೆಂಕಟರಾಮ, ಜೋಗಿ ಮಂಜು, ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಮಂಜುನಾಥ್, ವಿ.ಶೈಲೇಂದ್ರ, ಪಿ.ಶೇಷಾದ್ರಿ, ಮಡ್ಡೀಕೆರೆ ಗೋಪಾಲ್, ಎನ್‌ಐಇ ಕಾರ್ಯದರ್ಶಿ ಶೇಖರ್, ಮುಡಾ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಚೇತನ್ ರಾಮ್, ವಾದಿರಾಜ್, ಕುಶಾಲ್ ಕುಮಾರ್, ಸಿಂಡಿಕೇಟ್ ಮಾಜಿ ಸದಸ್ಯ ಕೆ.ಮಹದೇವ್, ಸುಧಾಕರ ಹೊಸಳ್ಳಿ ಸೇರಿ ಇತರರು ಅಂತಿಮ ದರ್ಶನ ಪಡೆದರು.