ಬಂಗಾರಪೇಟೆ ಗ್ರಾಮಾಂತರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಉಸ್ತುವಾರಿ ಆಗಿರುವ ಎಫ್ಡಿಎ ಮಹಿಳಾ ನೌಕರರೊಬ್ಬರು ಪಟ್ಟಣದಲ್ಲಿ ಗುರುವಾರ ಲಂಚ ಪಡೆಯುವಾಗ ಎಸಿಬಿ ದಾಳಿಗೆ ಸಿಕ್ಕಿಬಿದ್ದಿದ್ದಾರೆ.
ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಸಿಡಿಪಿಒ ಕಚೇರಿಯಲ್ಲಿ ಎಫ್ಡಿಎ ಉದ್ಯೋಗಿಯಾಗಿರುವ ರೂಪಾ ಎಂಬಾಕೆಗೆ ಸಿಡಿಪಿಒ ರಮ್ಯಾ ರಜೆಯಲ್ಲಿರುವುದರಿಂದ ಉಸ್ತುವಾರಿ ನೀಡಲಾಗಿತ್ತು. ಕಚೇರಿಗೆ ಕಂಪ್ಯೂಟರ್ ಆಪರೇಟರ್ಗಳನ್ನು ಹೊರ ಗುತ್ತಿಗೆ ಆಧಾರದ ಮೇರೆಗೆ ನೇಮಿಸಿಕೊಳ್ಳಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ದಾರರ ಕಡತ ಪೈನಲ್ ಮಾಡಲು ಲಂಚ ಪಡೆಯುತ್ತಿದ್ದಾಗ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.
ಕಚೇರಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ಗಳನ್ನು ನೇಮಿಸಿಕೊಳ್ಳಲು ಇಲಾಖೆಯಿಂದ ಟೆಂಡರ್ ಕರೆಯಲಾಗಿತ್ತು. ಇದರಲ್ಲಿ ಬೇತಮಂಗಲದ ಕಾವೇರಿ ಎಂಟರ್ಪ್ರೆಸಸ್ ಸೇರಿ ಮೂವರು ಟೆಂಡರ್ ಹಾಕಿದ್ದರು. ಕಾವೇರಿ ಎಂಟರ್ಪ್ರೆಸಸ್ ಮೆನ್ ಪವರ್ ಅವರ ಎಲ್ಲ ದಾಖಲೆಗಳು ಸರಿಯಾಗಿದ್ದರೂ ಅದನ್ನು ನಿರಾಕರಿಸಿ ದಾಖಲೆ ಸಮರ್ಪಕವಾಗಿರದವರ ಟೆಂಡರ್ದಾರರನ್ನು ಉಪ ನಿದೇರ್ಶಕರು ಕೋಲಾರ ಅನುಮೋದನೆಗೆ ಕಳುಹಿಸಿದ್ದರು. ಇದನ್ನು ಪ್ರಶ್ನಿಸಿ ಕಾವೇರಿ ಎಂಟರ್ಪ್ರೆಸಸ್ ಮಾಲೀಕರು ಇಲಾಖೆಯ ಉಪನಿದೇರ್ಶಕರಿಗೆ ದೂರು ನೀಡಿದ್ದರು.
ಅದರಂತೆ ಟೆಂಡರ್ದಾರರ ದಾಖಲೆಗಳನ್ನು ಮರು ಪರಿಶೀಲನೆ ಮಾಡಿ ಕಳುಹಿಸಲು ಸೂಚಿಸಲಾಗಿತ್ತು. ಕಾವೇರಿ ಎಂಟರ್ಪ್ರೆಸಸ್ ಅವರ ಎಲ್ಲ ದಾಖಲೆಗಳು ಸರಿಯಾಗಿದ್ದರಿಂದ ಅದನ್ನು ಅನುಮೋದಿಸಲು 10ಸಾವಿರ ರೂ. ಲಂಚಕ್ಕೆ ಸಿಡಿಪಿಒ ಉಸ್ತುವಾರಿ ರೂಪಾ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಮೊದಲ ಕಂತಿನಂತೆ ಸಾವಿರ ರೂ. ಕೊಡಲಾಗಿತ್ತು. ನಂತರ 2 ಸಾವಿರ ರೂ., ಗುರುವಾರ 3 ಸಾವಿರ ರೂ. ಕೊಡಲು ಕಾವೇರಿ ಎಂಟರ್ಪ್ರೆಸಸ್ ಮಾಲೀಕರು ಕಚೇರಿಗೆ ಬಂದಾಗ ಕಚೇರಿಯಲ್ಲಿ ಸಿಸಿ ಕ್ಯಾಮರಾ ಇದೆ ಎಂದು ಹೇಳಿ ಕಚೇರಿ ಪಕ್ಕದಲ್ಲೆ ಇರುವ ಟೀ ಅಂಗಡಿಯಲ್ಲಿ ಹಣ ಪಡೆಯುವಾಗ ಎಸಿಬಿ ಡಿವೈಎಸ್ಪಿ ಸುಧೀರ್, ಇನ್ಸ್ಪೆಕ್ಟರ್ ಫಾರೂಕ್ ಪಾಷಾ ದಾಳಿ ಮಾಡಿ ರೂಪಾ ಅವರನ್ನು ವಶಕ್ಕೆ ಪಡೆದಿದ್ದಾರೆ.