ಎಲ್ಲೆಡೆ ಭಕ್ತಿಭಾವದ ನಾಗರ ಪಂಚಮಿ ಆಚರಣೆ

ಎಲ್ಲೆಡೆ ಭಕ್ತಿಭಾವದ ನಾಗರ ಪಂಚಮಿ ಆಚರಣೆ
Published on

ಹಾಸನ: ನಾಗರ ಪಂಚಮಿ ಪ್ರಯುಕ್ತ ನಗರ ಸೇರಿದಂತೆ ಜಿಲ್ಲಾದ್ಯಂತ ಹುತ್ತ ಮತ್ತು ನಾಗರಕಟ್ಟೆಗಳಲ್ಲಿ ನಾಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಹೆಂಗಸರು ಹಾಗೂ ಮನೆ ಮಂದಿ ಮಡಿಯುಟ್ಟು ದೇವಾಲಯ ಹಾಗೂ ಹುತ್ತ ಇರುವ ಕಡೆಗೆ ತೆರಳಿ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿ, ಎಲ್ಲಾ ದೋಷಗಳನ್ನು ನಿವಾರಿಸು ದೇವ ಎಂದು ಭಕ್ತಿ ಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದರು.ಇದೇ ರೀತಿ ದೇವಾಲಯಗಳಲ್ಲೂ ವಿಶೇಷ ಪೂಜೆ ಪುನಸ್ಕಾರ ನಡೆದವು.
ಅರಸೀಕೆರೆ ನಗರದ ಚಂದ್ರಮೌಳೇಶ್ವರ ಶಿವಾಲಯ, ಭವಾನಿ ಶಂಕರ ದೇವಾಲಯ ಹಾಗೂ ಲಕ್ಷೀಪುರ ಬಡಾವಣೆಯಲ್ಲಿರುವ ರುದ್ರಾಕ್ಷಿ ಫೌಂಡೇಶನ್ ಆವರಣದಲ್ಲಿರುವ ಅಶ್ವಥ ವೃಕ್ಷ ಸಮೇತ ನಾಗರಕಟ್ಟೆಯಲ್ಲಿ ನೆಲೆಸಿರುವ ನಾಗದೇವತೆಗಳಿಗೆ ಹಾಲು ತುಪ್ಪ ಎರೆದು ಚಿಗಣಿ ತಂಬಿಟ್ಟು ಹಾಗೂ ಫಲಾಹಾರಗಳ ನೈವೇದ್ಯದೊಂದಿಗೆ ಶ್ರದ್ಧೆ ಭಕ್ತಿಯೊಂದಿಗೆ ಭಕ್ತರು ನಾಗಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.
ನಾಗರ ಪಂಚಮಿ ಪ್ರಯುಕ್ತ ನಾಗರಕಟ್ಟೆ ಹಾಗೂ ವಿಗ್ರಹಗಳು ಇರುವ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದರಿಂದ ಮುಂಜಾನೆಯಿಂದಲೇ ಭಕ್ತರು ಕುಟುಂಬ ಸಮೇತ ಆಗಮಿಸಿ ನಾಗದೇವತೆಗಳ ಜತೆಗೆ ಕ್ಷೇತ್ರ ದೇವತೆಗಳಿಗೆ ಪೂಜಿ ಸಲ್ಲಿಸಿ ಮನದ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.
ನಾಗ ಪಂಚಮಿ ಆಚರಣೆ ಕುರಿತು ರುದ್ರಾಕ್ಷಿ ಫೌಂಡೇಶನ್‌ನ ಜಯಪ್ರಕಾಶ ಗುರೂಜಿ ಮಾತನಾಡಿ,ನಾಗದೇವತೆಗಳ ಆರಾಧನೆ ಯುಗಯುಗಗಳಿಂದಲೂ ಆಚರಣೆಯಲ್ಲಿದೆ. ಕಲಿಯುಗದಲ್ಲಿ ನಾಗದೇವತೆಗಳ ಆಚರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ನಾಗಪಂಚಮಿ, ಚೌತಿ ನಾಗರಪೂಜೆ, ಕುಳೆ ನಾಗರಪೂಜೆ, ಹೀಗೆ ಹಲವು ಸಂದರ್ಭಗಳಲ್ಲಿ ನಾಗರ ಪೂಜೆಯನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಮಾಡುತ್ತಾರೆ. ಹಾಗಾಗಿ ನಾಗದೇವತೆಗಳು ಪ್ರತಿ ಒಂದು ಕುಟುಂಬದ ಆರಾಧ್ಯ ದೇವತೆಗಳಾಗಿವೆ ಎಂದು ಹೇಳಿದರು.
ನಾಗದೇವತೆಗಳ ಆಚರಣೆ ಧಾರ್ಮಿಕ ಆಚರಣೆ ಮಾತ್ರವಲ್ಲ, ಮನುಷ್ಯನ ಬೆಳವಣಿಗೆ ಹಾಗೂ ಏಳಿಗೆಗೆ ಹಾವುಗಳ ಕೊಡುಗೆಯೂ ಅಪಾರವಾಗಿದೆ.
ರೈತ ಬೆಳೆಯುವ ಬಹುತೇಕ ಭಾಗ ಇಲಿಗಳ ಪಾಲಾಗುತ್ತದೆ. ಹಾವುಗಳು ಇಲಿಗಳನ್ನು ನುಂಗುವ ಮೂಲಕ ರೈತ ಮಿತ್ರ ಎನಿಸುತ್ತವೆ.ಹಾಗಾಗಿ ಪ್ರತಿಯೊಬ್ಬ ರೈತನ ಕೃಷಿ ಭೂಮಿಯಲ್ಲಿ ನಾಗರಹಾವುಗಳನ್ನು ನಾವು ಕಾಣಬಹುದು ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಪರಿಸರ ತಜ್ಞ ಡಾ.ಹೆಚ್.ಆರ್.ಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net