

ಆಲ್ದೂರು: ನಾರಾಯಣ ಗುರುಗಳು ಹೇಳಿದಂತೆ ಸರ್ವಧರ್ಮ ಸಮುದಾಯದವರನ್ನು ತಾರತಮ್ಯವಿಲ್ಲದೆ ಪ್ರೀತಿ, ಸಹೋದರ ಭಾವದಿಂದ ಕಾಣಬೇಕು ಎಂದು ಕನ್ಯಾಡಿ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಆಲ್ದೂರು ಬಿಲ್ಲವ ಸಮಾಜ ಸೇವಾ ಸಂಘದಿಂದ ಆಯೋಜಿಸಿದ್ದ ನಾರಾಯಣ ಗುರುಗಳ 171ನೇ ಜನ್ಮದಿನೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಮಾನವ ಜನ್ಮ ಪವಿತ್ರವಾದುದು. ಸರ್ವ ಧರ್ಮದವರನ್ನೂ ಸಮಾನತೆಯಿಂದ ಕಾಣುವ ಮೂಲಕ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಬೇಕೆಂಬುದೇ ನಾರಾಯಣಗುರುಗಳ ಆಶಯವಾಗಿದೆ. ಗುರುಗಳ ತತ್ವ, ಆದರ್ಶಗಳನ್ನು ಪಾಲಿಸಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದರು.
ಸಮುದಾಯದ ಮುಖಂಡರು ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಸಮಾಜದ ಅಭಿವೃದ್ಧಿಯ ವಿಷಯ ಬಂದಾಗ ಎಲ್ಲರೂ ಸಂಘಟಿತರಾಗಿ ಪ್ರಗತಿಗೆ ಪ್ರಾಧಾನ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಬಿಲ್ಲವ ಸಂಘದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಬಿಲ್ಲವ ಸಮುದಾಯದ ಸಂಘ ಸಂಸ್ಥೆಗಳು ವಿದೇಶಗಳಲ್ಲೂ ಸ್ಥಾಪನೆಯಾಗಿದ್ದು ಅಭಿವೃದ್ಧಿಯತ್ತ ಸಾಗುತ್ತಿವೆ. ಕೋಟಿ ಚನ್ನಯ್ಯ ಅವರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ನಮ್ಮ ಸಮಾಜದಿಂದ ಆಗಬೇಕಿದೆ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ, ಬಿಲ್ಲವ ಸಮಾಜದ ಸಾಮಾಜಿಕ ಕಾರ್ಯಗಳು ಎಲ್ಲ ಸಮುದಾಯಕ್ಕೂ ಮಾದರಿಯಾಗಿವೆ ಎಂದು ಹೇಳಿದರು.
ನಾರಾಯಣಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್, ಬಿಲ್ಲವ ಸಮಾಜದ ಅಧ್ಯಕ್ಷ ಕೆ.ಎಲ್.ಕುಮಾರ್, ಗೌರವ ಅಧ್ಯಕ್ಷ ಭೋಜ ಪೂಜಾರಿ, ವಿಶ್ವನಾಥ್, ಅಶೋಕ್ ಸಾಲಿಯಾನ, ಮುಖಂಡರಾದ ರತ್ನಾಕರ ಪೂಜಾರಿ, ಮುದರ ಪೂಜಾರಿ, ಕೃಷ್ಣಪ್ಪ, ಗುಣಶೇಖರ್, ಪ್ರಸನ್ನಕುಮಾರ್, ವಾಸು ಪೂಜಾರಿ, ಕೇಶವ ಪೂಜಾರಿ, ಸುಗುಣ, ಗ್ರಾಪಂ ಸದಸ್ಯ ರಾಜು, ಶೇಖರ್, ಕೃಷ್ಣ, ರಮೇಶ್, ಮೋಹನ್ , ವಸಂತ್ ಶಂಕರ್ ಮುಂತಾದವರಿದ್ದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.