

ರಾಷ್ಟ್ರಕವಿ ಕುವೆಂಪು ನೀಡಿರುವ ವಿಶ್ವ ಮಾನವ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಸಲಹೆ ನೀಡಿದರು.
ಕುವೆಂಪುನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ವಿಶ್ವಮಾನವ ಸಂದೇಶ ಪ್ರಚಾರದ ವ್ರತ ಕೈಗೊಂಡಿದ್ದರು. ಯಾರೇ ಕಾರ್ಯಕ್ರಮಕ್ಕೆ ಕರೆಯಲು ಹೋದರೂ ವಿಶ್ವಮಾನವ ಸಂದೇಶದ ಪ್ರತಿಗಳನ್ನು ನೀಡಿ, ಇದರ ಪ್ರತಿಗಳನ್ನು ಮುದ್ರಿಸಿ ಹಂಚಿ ಎಂದು ಸಲಹೆ ನೀಡುತ್ತಿದ್ದರು. ಅದರ ಜತೆಯಲ್ಲಿಯೇ ಎಲ್ಲಾದರು ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು ಎಂದು ತಮ್ಮ ಕವನದ ಮೂಲಕ ಕುವೆಂಪು ಅವರು ನಮಗೆಲ್ಲರಿಗೂ ಸಂದೇಶ ನೀಡಿದ್ದಾರೆ ಎಂದರು.
ಜಾತಿ, ಮತ ನಿವಾರಣೆಯಾಗದೆ ಸಮಾಜ ಪರಿವರ್ತನೆ ಅಸಾಧ್ಯ ಎಂಬುದು ಅವರ ಧೃಡ ನಿಲುವಾಗಿತ್ತು. ಕುವೆಂಪು ಅವರು 20ನೇ ಶತಮಾನ ಕಂಡ ದೈತ್ಯ ಪ್ರತಿಭೆ, ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ಶ್ರೀರಾಮಾಯಣ ದರ್ಶನಂನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ ಎಂದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಉದ್ಯಮಿಗಳಾದ ಏಕನಾಥ್ ರೈ, ಕೆ.ಎನ್.ಸಂತೋಷ್, ಎಂ.ಮೋಹನ್, ಮುಖಂಡರಾದ ಡಾ.ಎಲ್. ದೇವೆಗೌಡ, ಜಗದೀಶ್, ರಾಮಪ್ಪ ರಮೇಶ್, ರಘುರಾಮ್ ಗೌಡ, ರಾಮು, ಕೆ.ಆರ್.ಜಗದೀಶ್ ಕುಮಾರ್ ಇತರರು ಇದ್ದರು.